ನ್ಯೂಸ್

ಮಹಾಯುತಿಗೆ ಆರತಿ ಹಳಿತಪ್ಪಿದ ಅಘಾಡಿ

ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕೇವಲ 9 ಸೀಟನ್ನು ಗೆದ್ದಿದ್ದ ರಾಜ್ಯ ಬಿಜೆಪಿಗೆ ಅಕ್ಷರಶಃ ಮಂಕು ಕವಿದಿತ್ತು. ಇದಾಗಿ ಆರು ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಅಚ್ಚರಿಯ ಫಲಿತಾಂಶ ನೀಡಿದೆ. ಒಂದು ಸಂಘಟನೆಯಾಗಿ ಹಗಲಿರುಳು ಶ್ರಮ ಹಾಕಿದ್ದ ಪರಿಣಾಮ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಮಹಾರಾಷ್ಟ್ರದಲ್ಲಿ ಭಾರಿ ಗೆಲುವು ದಾಖಲಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬಂದಿದೆ.

ರಾಘವ ಶರ್ಮ ನಿಡ್ಲೆ, ನವದೆಹಲಿ ಲೋಕಸಭೆಯ 48 ಸೀಟುಗಳಲ್ಲಿ ಬರೀ 17ನ್ನು ತನ್ನದಾಗಿಸಿಕೊಂಡಿದ್ದ ಮಹಾಯುತಿ, ವಿಧಾನಸಭೆ ಚುನಾವಣೆ ದಿಗ್ವಿಜಯದ ಮೂಲಕ ಹೊಸ ಇತಿಹಾಸ ಬರೆದಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಇತರೆ ಸಹ ಸಂಘಟನೆಗಳೊಂದಿಗೆ ಕೈಜೋಡಿಸಿಕೊಂಡು ತಂತ್ರಗಾರಿಕೆ ರೂಪಿಸಿದ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಮುಖ್ಯಮಂತ್ರಿ, ಶಿವಸೇನೆಯ ಏಕನಾಥ ಶಿಂದೆ ಅಭೂತಪೂರ್ವ ಜನಮನ್ನಣೆ ಗಳಿಸಿರುವುದು ಫಲಿತಾಂಶದಲ್ಲಿ ಸಾಬೀತಾಗಿದೆ. ಎನ್​ಡಿಎ ನೇತೃತ್ವದ ಮಹಾಯುತಿ ಮೈತ್ರಿಕೂಟ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿಯನ್ನು ಮಕಾಡೆ ಮಲಗಿಸಿದೆ. ಈ ಚುನಾವಣೆ ಸೋಲಿನಿಂದ ಎನ್​ಸಿಪಿ ಹಿರಿಯ ನಾಯಕ ಶರದ್ ಪವಾರ್ ರಾಜಕೀಯ ಪ್ರಯಾಣ ಬಹುತೇಕ ಅಂತ್ಯಗೊಂಡಿದೆ. ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಭವಿಷ್ಯದ ಮುಂದೆ ಪ್ರಶ್ನಾರ್ಥಕ ಚಿಹ್ನೆಯಿದೆ.

ಕೇಸರಿಗೆ ನಾರಿಶಕ್ತಿ: ಲೋಕಸಭೆ ಹಿನ್ನಡೆ ಬಳಿಕ ರಾಜ್ಯದ ರೈತರು, ಮಹಿಳೆಯರು ಮತ್ತು ಒಬಿಸಿ (ಇತರೆ ಹಿಂದುಳಿದ ವರ್ಗ) ಮತಬ್ಯಾಂಕನ್ನು ಗುರಿಯಾಗಿಸಿ ತಂತ್ರ ರೂಪಿಸಿದ ಬಿಜೆಪಿ ಕಳೆದ 6 ತಿಂಗಳಲ್ಲಿ ಜನರನ್ನು ತಲುಪುವ ವಿಷಯದಲ್ಲಿ ಮ್ಯಾಜಿಕ್ಕನ್ನೇ ಮಾಡಿದೆ. ಮಧ್ಯಪ್ರದೇಶದಲ್ಲಿ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ‘ಲಾಡ್ಲಿ ಬೆಹನಾ’ ಯೋಜನೆ ಮೂಲಕ ರಾಜ್ಯವ್ಯಾಪಿ ಮಹಿಳೆಯರ ಮೆಚ್ಚುಗೆಗೆ ಪಾತ್ರವಾಗಿ, ಚುನಾವಣೆಯಲ್ಲೂ ದಿಗ್ವಿಜಯ ಸಾಧಿಸಿದ್ದರು. ಮಹಾರಾಷ್ಟ್ರದಲ್ಲೂ ಇದನ್ನೇ ಅನುಸರಿಸಲು ಮುಂದಾದ ಮಹಾಯುತಿ ಸರ್ಕಾರ, ‘ಮಾಝಿ ಲಡ್ಕಿ ಬಹಿನ್’ ಯೋಜನೆಯನ್ನು ಜಾರಿಗೊಳಿಸಿತು. ಯೋಜನೆ ಪ್ರಕಾರ, 18ರಿಂದ 60 ವಯಸ್ಸಿನ ಅರ್ಹ ಮಹಿಳೆಯರಿಗೆ (2.25 ಕೋಟಿ) ತಿಂಗಳಿಗೆ ತಲಾ 1500 ರೂ. ಹಣವನ್ನು ಸರ್ಕಾರ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದೆ. ರಾಜ್ಯದಲ್ಲಿ ಮರು ಆಯ್ಕೆಯಾದರೆ ಈ ನೆರವನ್ನು 2100 ರೂ.ಗೆ ಏರಿಸುವುದಾಗಿ ಮಹಾಯುತಿ ಭರವಸೆ ನೀಡಿದೆ. ರಾಜ್ಯದ ಗ್ರಾಮೀಣ ಭಾಗದ ಹಾಗೂ ಕೆಳಮಧ್ಯಮ ವರ್ಗದ ಮಹಿಳೆಯರು ಮಹಾಯುತಿ ಮೈತ್ರಿಕೂಟವನ್ನು ಬೆಂಬಲಿಸಿರುವುದರಲ್ಲಿ ಈ ಯೋಜನೆ ನಿರ್ಣಾಯಕ ಪಾತ್ರವಹಿಸಿದೆ. 2019ಕ್ಕೆ ಹೋಲಿಸಿದರೆ ಈ ಸಲ ಮಹಿಳಾ ಮತಗಳ ಸಂಖ್ಯೆ ಶೇ.6ರಷ್ಟು ಏರಿಕೆಯಾಗಿರುವುದೂ ಇಲ್ಲಿ ಗಮನಾರ್ಹ.

ಮರಾಠಾ ಮೀಸಲಾತಿ ಬದಿದೆ: ಸಂಕೀರ್ಣ ಜಾತಿ ಸಮೀಕರಣಗಳ ನಡುವೆ, ಸಾಮಾಜಿಕ ಸಮೀಕರಣದ ಸವಾಲು ಮಹಾಯುತಿ ಮುಂದಿತ್ತು. ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಮೀಸಲಾತಿ ಆಂದೋಲನ ಮರಾಠವಾಡ, ಉತ್ತರ ಮತ್ತು ಪಶ್ಚಿಮ ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ಮರಾಠ ಮತ್ತು ಒಬಿಸಿಗಳ ನಡುವಿನ ತೀಕ್ಷ್ಣ ಧ್ರುವೀಕರಣಕ್ಕೆ ಕಾರಣವಾಗಿತ್ತು. ಮರಾಠ ಮತಗಳು ಬಿಜೆಪಿಗೆ ವಿರುದ್ಧವಾಗಿ ಹೋಗುತ್ತವೆ; ಈ ಧ್ರುವೀಕರಣದ ಲಾಭವನ್ನು ಶರದ್ ಪವಾರ್ ಪಡೆಯಲಿದ್ದಾರೆ ಎಂಬ ಚರ್ಚೆಗಳು ಗರಿಗೆದರಿದ್ದವು. ಆದರೆ ಬಿಜೆಪಿಯ ಹಿಂದೂ ಏಕತೆಯ ನಿರೂಪಣೆ, ಮರಾಠ-ಒಬಿಸಿ ಧ್ರುವೀಕರಣಕ್ಕೆ ಬ್ರೇಕ್ ಹಾಕಿತು. ಮೇಲಾಗಿ, ಮುಖ್ಯಮಂತ್ರಿ ಏಕನಾಥ ಶಿಂಧೆ ಮರಾಠರಲ್ಲಿ ಬಿಜೆಪಿವಿರೋಧಿ ಆಕ್ರೋಶ ತಣ್ಣಗಾಗಿಸುವಲ್ಲಿ ಯಶಸ್ವಿಯಾದರು. ಶೇ 33% ಜನಸಂಖ್ಯೆಯ, ರಾಜಕೀಯವಾಗಿ ಪ್ರಬಲವಾಗಿರುವ ಮರಾಠ ಸಮುದಾಯ ತಿರುಗಿಬಿದ್ದರೆ, ಸೋಲು ಖಚಿತ ಎನ್ನುವುದು ಶಿವಸೇನೆ-ಬಿಜೆಪಿ ನಾಯಕರಿಗೆ ತಿಳಿದಿತ್ತು.

ಏಕ್ ಹೈ ತೋ ಸೇಫ್ ಹೈ: ಅಭಿವೃದ್ಧಿ ಮತ್ತು ಹಿಂದುತ್ವ ಮಂತ್ರವೂ ಮಹಾಯುತಿಗೆ ನೆರವಾಗಿದೆ. ಈಚಿನ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಘೊಷವಾಕ್ಯ ‘ಬಟೇಂಗೇ ತೋ ಕಟೇಂಗೆ’ ಹಿಂದು ಮತಗಳನ್ನು ಒಗ್ಗೂಡಿಸುವಲ್ಲಿ ನೆರವಾಗಿತ್ತು. ಮಹಾರಾಷ್ಟ್ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಹಿಂದು ಒಗ್ಗಟ್ಟಿನ ಮಂತ್ರ ಜಪಿಸುತ್ತಾ ‘ಏಕ್ ಹೈ ತೋ ಸೇಫ್ ಹೈ’ ಎಂಬ ಸಂದೇಶ ರವಾನಿಸಿದರು. ರಾಜ್ಯ ನಾಯಕರೂ ಇದಕ್ಕೆ ದನಿಗೂಡಿಸಿದರು. ಮಿತ್ರಪಕ್ಷ ಎನ್​ಸಿಪಿ ನಾಯಕ ಅಜಿತ್ ಪವಾರ್ ಈ ಘೊಷವಾಕ್ಯಕ್ಕೆ ಕಂಠ ಕೊಡದಿದ್ದರೂ, ಮಹಾಯುತಿ ಪರ ಜನ ಬೆಂಬಲ ಹೆಚ್ಚಿಸುವಲ್ಲಿ ಇದು ಸಹಾಯ ಮಾಡಿದೆ. ಎನ್​ಡಿಎ ಮೈತ್ರಿಕೂಟ ದೇಶದಲ್ಲಿ ಮೀಸಲಾತಿ ಕೊನೆಗೊಳಿಸಲಿದೆ, ಸಂವಿಧಾನವನ್ನು ನಾಶಮಾಡಲಿದೆ ಎಂಬ ಕಾಂಗ್ರೆಸ್ಸಿಗರ ಹಳೇ ರಾಗವನ್ನು ಮತದಾರ ನೆಚ್ಚಿಕೊಳ್ಳಲಿಲ್ಲ.

ಒಬಿಸಿ ಒಗ್ಗೂಡಿಸುವಿಕೆ: ಒಬಿಸಿಗಳನ್ನು ಪಕ್ಷದ ಪರ ಒಗ್ಗೂಡಿಸುವ ಕಾರ್ಯಾಚರಣೆ ಮಾಡಿದ ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಕೂಡ ಮಹಾಯುತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಛಿದ್ರಗೊಂಡಿದ್ದ 353 ಸಮುದಾಯಗಳನ್ನು ಒಗ್ಗೂಡಿಸುವ ಬೃಹತ್ ಕಾರ್ಯಾಚರಣೆಗೆ ಕೈಹಾಕಿದ ಬಿಜೆಪಿ, ಪ್ರದೇಶವಾರು ಒಬಿಸಿ ಸಂಪರ್ಕ ಅಭಿಯಾನ ನಡೆಸುತ್ತಾ, ಒಬಿಸಿ ಸಮುದಾಯದ ಮನೆಮನೆಗೆ ತೆರಳಿ ತನ್ನ ಉದ್ದೇಶವನ್ನು ತಿಳಿಸಿತು. ಕೇಂದ್ರ ಒಬಿಸಿ ಪಟ್ಟಿಯಲ್ಲಿ ಏಳು ಜಾತಿಗಳು ಅಥವಾ ಉಪಜಾತಿಗಳನ್ನು ಸೇರಿಸಲು ಒಬಿಸಿ ಆಯೋಗಕ್ಕೆ ಬಿಜೆಪಿ ಪ್ರಸ್ತಾಪವನ್ನೂ ಸಲ್ಲಿಸಿತು. ಒಬಿಸಿ ಮತಬ್ಯಾಂಕನ್ನು ಸೆಳೆದುಕೊಳ್ಳುವ ಸೂಕ್ಷ್ಮ ತಂತ್ರಗಾರಿಕೆ ಭಾರೀ ಫಲಕೊಟ್ಟಿದೆ. ರಾಜ್ಯದಲ್ಲಿ ಸುಮಾರು 38% ಒಬಿಸಿ ಜನಸಂಖ್ಯೆಯಿದ್ದು, 288 ಸೀಟುಗಳಲ್ಲಿ 175ರಲ್ಲಿ ಒಬಿಸಿ ಮತದಾರರು ನಿರ್ಣಾಯಕ ಎನಿಸಿಕೊಂಡಿದ್ದಾರೆ. ಇವೆಲ್ಲದರ ಜತೆಗೆ, ಬ್ರಾ್ಯಂಡ್ ಮೋದಿ ಇಮೇಜ್ ಕೂಡ ಪಕ್ಷದ ಗೆಲುವಿನ ಪೂರಕ ಅಂಶಗಳಲ್ಲೊಂದು.

ಹೆಗಲು ಕೊಟ್ಟ ಆರ್​ಎಸ್​ಎಸ್: ಲೋಕಸಭೆ ಚುನಾವಣೆಯಲ್ಲಿ ಬಹುತೇಕ ದೂರವೇ ಉಳಿದಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಜತೆ ಸೇರಿ ಆಕ್ರಮಣಕಾರಿ ಕೆಲಸ ಮಾಡಿದ್ದರ ಪರಿಣಾಮವೇ ಈ ಫಲಿತಾಂಶ ಎನ್ನುವುದನ್ನು ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ. ಅಭೂತಪೂರ್ವ ಗೆಲುವಿನ ಖಾತರಿಯಾಗುತ್ತಿದ್ದಂತೆಯೇ ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ದೇವೇಂದ್ರ ಫಡ್ನವಿಸ್​ಗೆ ಫೋನಾಯಿಸಿ ಅಭಿನಂದನೆ ತಿಳಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸಂಘ ಶಿಫಾರಸು ಮಾಡಿದ್ದ ಹಲವರಿಗೆ ಟಿಕೆಟ್ ನೀಡಲು ದಿಲ್ಲಿ ನಾಯಕರ ಆಕ್ಷೇಪಗಳಿದ್ದವು. ಹೀಗಾಗಿ, ಸಂಘ ಚುನಾವಣೆಯಿಂದ ದೂರವೇ ಇತ್ತು. ಲೋಕಸಭೆ ಹಿನ್ನಡೆ ಬಳಿಕ ಮುಂಬೈನಲ್ಲಿ ಚಿಂತನ-ಮಂಥನ ನಡೆಸಿದ್ದ ಆರ್​ಎಸ್​ಎಸ್, ಫಡ್ನವಿಸ್ ಜತೆಗೆ ಗಂಭೀರ ಚರ್ಚೆಗಳನ್ನು ಮಾಡಿತ್ತು. ಚುನಾವಣೆಗೆ ಮುನ್ನ ರಾಜ್ಯಾದ್ಯಂತ ಸುಮಾರು 60 ಸಾವಿರ ಸಣ್ಣ ಸಣ್ಣ ಸಭೆಗಳನ್ನು ನಡೆಸಿ, ಜನರನ್ನು ತಲುಪಿತ್ತು. ಸುಮಾರು 60ಕ್ಕಿಂತಲೂ ಸಹ-ಸಂಘಟನೆಗಳು ಕೈಜೋಡಿಸಿ, ‘ಸಜಗ್ ರಹೋ’ (ಜಾಗೃತವಾಗಿರಿ) ಎಂಬ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಿತು. ಎನ್​ಡಿಎಗೆ ಅಜಿತ್ ಪವಾರ್ ನಾಯಕತ್ವದ ಎನ್​ಸಿಪಿ ಸೇರ್ಪಡೆಯಾಗಿದ್ದು ಆರ್​ಎಸ್​ಎಸ್​ಗೆ ಹಿಡಿಸಿರಲಿಲ್ಲ. ಹೀಗಿದ್ದರೂ, ಫಡ್ನವಿಸ್ ನೇತೃತ್ವ ಇರಬೇಕು ಎಂದು ಷರತ್ತು ಹಾಕಿದ್ದ ಸಂಘದ ಮುಖಂಡರು, ಮಹಾಯುತಿ ಪರ ಅಭಿಪ್ರಾಯ ರೂಪಿಸುವಲ್ಲಿ ಯಶಸ್ವಿಯಾದರು.

ಮಹಾಯುತಿ ಗೆಲುವು ದೆಹಲಿಗೆ ಪೂರಕ: ಮಹಾರಾಷ್ಟ್ರದಲ್ಲಿನ ಮಹಾಯುತಿ ಗೆಲುವು ಬಿಜೆಪಿಗೆ ದೆಹಲಿ ಚುನಾವಣೆ ಸಂಬಂಧ ಮತ್ತಷ್ಟು ಹುರುಪು ನೀಡಿದೆ. ‘ಮಹಾರಾಷ್ಟ್ರದಲ್ಲಿನ ಗೆಲುವು ಮೋದಿ ಮ್ಯಾಜಿಕ್​ಗೆ ಜನರು ನೀಡಿದ ಮುದ್ರೆ’ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್​ದೇವ ಹೇಳಿದ್ದಾರೆ. ಇತ್ತೀಚಿನ ಹರಿಯಾಣ ಚುನಾವಣೆ ಗೆಲುವು ಹಾಗೂ ಈಗಿನ ಮಹಾರಾಷ್ಟ್ರ ಚುನಾವಣೆ ಮತ್ತು ಉತ್ತರಪ್ರದೇಶದ ಉಪ ಚುನಾವಣೆಗಳ ಗೆಲುವು ನಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ. ಇದರಿಂದ ಪಕ್ಷದ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಾಗಿದ್ದು, ದೆಹಲಿಯಲ್ಲಿನ ಆಪ್ ನೇತೃತ್ವದ ಭ್ರಷ್ಟಾಚಾರದ ಆಡಳಿತವನ್ನು ತೊಲಗಿಸಲಾಗುವುದು ಎಂದರು.

ನೋಟಾ ಏನು ಮಹಾ: ಜಾರ್ಖಂಡ್​ಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ನೋಟಾಗೇನಿಲ್ಲ ಮಹಾ ಎನ್ನುವಂತಾಗಿದೆ. ಏಕೆಂದರೆ ಮಹಾರಾಷ್ಟ್ರದಲ್ಲಿ ಬರೀ ಶೇ. 0.75 ಮತಗಳು ನೋಟಾಗೆ ಬಿದ್ದಿದ್ದರೆ, ಜಾರ್ಖಂಡ್​ನಲ್ಲಿ ಈ ಪ್ರಮಾಣ ಶೇ. 1.32 ಆಗಿದೆ. ಲೇಟೆಸ್ಟ್ ಮಾಹಿತಿ ಪ್ರಕಾರ ಮಹಾರಾಷ್ಟ್ರದಲ್ಲಿ ಶೇ. 65.02 ಮತದಾನವಾಗಿದ್ದರೆ, ಜಾರ್ಖಂಡ್​ನಲ್ಲಿ ಮೊದಲ ಹಂತದಲ್ಲಿ ಶೇ.66.65, ಎರಡನೇ ಹಂತದಲ್ಲಿ ಶೇ. 68.45 ಮತದಾನವಾಗಿದೆ.

ಸೋಷಿಯಲ್ ಮೀಡಿಯಾ ಸ್ಟಾರ್​ಗೆ 131 ಮತ: ಮಹಾರಾಷ್ಟ್ರದಲ್ಲಿ ವರ್ಸೆವಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ, ಬಿಗ್ ಸ್ಪರ್ಧಿಯೂ ಆಗಿದ್ದ ನಟ ಅಜಾಜ್ ಖಾನ್​ಗೆ ಹೀನಾಯ ಸೋಲುಂಟಾಗಿದೆ. ಇನ್​ಸ್ಟಾಗ್ರಾಮ್ಲ್ಲಿ 56 ಲಕ್ಷ ಫಾಲೋವರ್ಸ್ ಇದ್ದರೂ ಇವರಿಗೆ ಬರೀ 131 ಮತಗಳು ಸಿಕ್ಕಿವೆ. ಭಾರಿ ಜನಪ್ರಿಯತೆ ಇದ್ದರೂ ಅದು ಮತ ಸೆಳೆಯುವಲ್ಲಿ ಕೆಲಸ ಮಾಡಿಲ್ಲ.

ಕೈ ಲೆಕ್ಕಾಚಾರ ತಲೆಕೆಳಗು: 103 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 87ರಲ್ಲಿ ಸೋತಿದೆ. ಪ್ರಬಲ ನಾಯಕತ್ವದ ಕೊರತೆ ಹಾಗೂ ಜನವಿಶ್ವಾಸ ಕಳೆದುಕೊಂಡ ಮಿತ್ರಪಕ್ಷಗಳಿಂದಾಗಿ ಹೀನಾಯ ಸೋಲು ಕಾಣುವಂತಾಗಿದೆ. 89 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 24 ಸೀಟು ಗೆದ್ದುಕೊಂಡಿದೆ. ಶಿವಸೇನೆ ನಿರ್ವಹಣೆ ಕಾಂಗ್ರೆಸ್​ಗಿಂತ ಮಿಗಿಲಾಗಿದೆ. ಶರದ್ ಪವಾರ್ ಅವರ ಎನ್​ಸಿಪಿ ಸ್ಪರ್ಧಿಸಿದ್ದ 87 ಸೀಟುಗಳಲ್ಲಿ 14ನ್ನು ಮಾತ್ರ ಗೆದ್ದುಕೊಂಡಿದೆ.

4 ಪ್ರಾದೇಶಿಕ ಬಣಗಳು ಹಾಗೂ ಬಿಜೆಪಿ, ಕಾಂಗ್ರೆಸ್ ಒಳಗೊಂಡ 6 ಪಕ್ಷಗಳ ನಡುವಿನ ಕದನವನ್ನು ಬಿಜೆಪಿ ಪೂರ್ಣಪ್ರಮಾಣದ ಪ್ರಾದೇಶಿಕ (ಸ್ಥಳೀಯಗೊಳಿಸುವುದು) ಸಂಘರ್ಷವನ್ನಾಗಿ ಬದಲಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ, ಉದ್ಯಮಿ ಅದಾನಿ ಬಗ್ಗೆ ಆಕ್ಷೇಪ, ಸಂವಿಧಾನ ನಾಶ, ಬಿಜೆಪಿ ಮೀಸಲಾತಿ ಕೊನೆಗೊಳಿಸುತ್ತದೆ ಎನ್ನುತ್ತಲೇ ಪ್ರಚಾರವನ್ನು ಮುಗಿಸಿದ್ದರು. ಜನರಿಗೆ ಹತ್ತಿರ ಎನಿಸುವ ವಿಷಯಗಳನ್ನು ಮನದಟ್ಟು ಮಾಡುವಲ್ಲೂ ಅವರು ವಿಫಲವಾದರು. ‘ದಿನನಿತ್ಯವೂ ಮೋದಿ-ಅದಾನಿ ಮಿತ್ರರು, ಅವರಿಂದ ದೇಶಕ್ಕೆ ಹಾನಿ ಎನ್ನುತ್ತಾ ಕೂತರೆ ಗ್ರಾಮೀಣ ಭಾಗದ ಮತದಾರನ ಮೇಲೆ ಅದು ಹೇಗೆ ಪ್ರಭಾವ ಬೀರುವುದು? ಹರ್ಯಾಣ ಸೋಲಿನಿಂದ ರಾಹುಲ್ ಯಾವುದೇ ಪಾಠ ಕಲಿತಿಲ್ಲ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ’ಎಂದು ಕಾಂಗ್ರೆಸ್ ಸಂಸದರೊಬ್ಬರು ಬೇಸರ ಹೊರಹಾಕಿದರು.

ಯಾರ ಸ್ಥಿತಿ ಏನು?

ದೇವೇಂದ್ರ ಫಡ್ನವಿಸ್ - ಪ್ರಸ್ತುತ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಅವರು ಬಿಜೆಪಿ ಗೆಲುವಿನ ಮೂಲಕ ಮತ್ತಷ್ಟು ಶಕ್ತಿಶಾಲಿಯಾಗಿ ಹೊರಹೊಮ್ಮಿದ್ದಾರೆ.

ಏಕನಾಥ ಶಿಂಧೆ - ಶಿವಸೇನೆ ಇಬ್ಭಾಗವಾದ ನಂತರ ತಮ್ಮ ಬಣದ ವರ್ಚಸ್ಸನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಸರ್ಕಾರದಲ್ಲಿ ಪ್ರಭಾವ ಉಳಿಸಿಕೊಳ್ಳಲಿದ್ದಾರೆ.

ಉದ್ಧವ್ ಠಾಕ್ರೆ - ರಾಜಕೀಯವಾಗಿ ತೀವ್ರ ಹಿನ್ನಡೆ. ಪ್ರಭಾವವೂ ಮತ್ತಷ್ಟು ಕುಗ್ಗಿದೆ

ಶರದ್ ಪವಾರ್ - ಒಂದು ಕಾಲದಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ಪವರ್​ಫುಲ್ ಆಗಿದ್ದ ಶರದ್ ಪವಾರ್ ಈಗ ಪವರ್ ಲೆಸ್ ಎಂಬಂತಾಗಿದ್ದಾರೆ.

ಅಜಿತ್ ಪವಾರ್ - ಚಿಕ್ಕಪ್ಪ ಶರದ್ ಪವಾರ್ ಬಣಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಗೆದ್ದಿದ್ದರೂ, ಮಹಾಯುತಿ ಸರ್ಕಾರದಲ್ಲಿ ಹೆಚ್ಚೇನೂ ಪ್ರಭಾವ ಹೊಂದಿಲ್ಲ. ಬಿಜೆಪಿ ಮತ್ತು ಶಿಂಧೆ ಬಣ ಸೇರಿದರೆ ಪೂರ್ಣ ಬಹುಮತ ಸಿಗಲಿದ್ದು, ಅಜಿತ್ ಪವಾರ್ ತಕ್ಕ ಮಟ್ಟಿಗೆ ಪ್ರಭಾವ ಉಳಿಸಿಕೊಂಡಿದ್ದಾರೆ.

ಗೆದ್ದ ಪ್ರಮುಖರು

  •  ಏಕನಾಥ ಶಿಂಧೆ (ಶಿವಸೇನೆ)
  • ದೇವೇಂದ್ರ ಫಡ್ನವೀಸ್ (ಬಿಜೆಪಿ)
  • ಅಜಿತ್ ಪವಾರ್ (ಎನ್​ಸಿಪಿ)
  • ಛಗನ್ ಭುಜಬಲ್ (ಎನ್​ಸಿಪಿ)
  • ಅದಿತ್ಯ ಠಾಕ್ರೆ (ಉದ್ಧವ್ ಬಣ)
  • ಧನಂಜಯ ಮುಂಡೆ (ಎನ್​ಸಿಪಿ)

ಸೋತ ಪ್ರಮುಖರು

  • ಮಿಲಿಂದ್ ದೇವರಾ (ಶಿವಸೇನೆ)
  • ಸಂಜಯ್ ನಿರುಪಮ್ (ಶಿವಸೇನೆ)
  • ನವಾಬ್ ಮಲಿಕ್ (ಎನ್​ಸಿಪಿ)
  • ಶಿಜಾನ್ ಬಾಬಾ ಸಿದ್ದಿಕಿ (ಎನ್​ಸಿಪಿ)

ಕಾಂಗ್ರೆಸ್ ಘಟಾನುಘಟಿಗಳಿಗೆ ಸೋಲು: ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಸಕೋಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಪರಾಭವಗೊಂಡಿದ್ದಾರೆ. ಕಾಂಗ್ರೆಸ್​ನ ಮುಖ್ಯಮಂತ್ರಿ ಅಭ್ಯರ್ಥಿಗಳು ಎಂದೇ ಬಿಂಬಿಸಿಕೊಂಡಿದ್ದ ಬಾಳಾಸಾಹೇಬ್ ಥೋರಟ್, ಪೃಥ್ವಿರಾಜ್ ಚವಾಣ್, ನಾನಾ ಪಟೋಲೆ ಪರಾಭವಗೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಮಹಾಯುತಿ ಪರವಾಗಿ ಬಂದಿರುವ ಫಲಿತಾಂಶ ಸಂಪೂರ್ಣ ಅನಿರೀಕ್ಷಿತ, ಗ್ರಹಿಕೆಗೂ ಮೀರಿದ್ದು. ಮಹಾರಾಷ್ಟ್ರ ನನ್ನೊಂದಿಗೆ ಹೀಗೆ ನಡೆದುಕೊಂಡಿದೆ ಎಂದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಫಲಿತಾಂಶದಲ್ಲಿ ಖಂಡಿತ ಏನೋ ಆಗಿದೆ.

| ಉದ್ಧವ್ ಠಾಕ್ರೆ ಶಿವಸೇನೆ(ಯುಬಿಟಿ) ಮುಖ್ಯಸ್ಥ

ಒಂದೆರಡು ರಾಜ್ಯಗಳನ್ನು ಬಿಟ್ಟರೆ ದೇಶಾದ್ಯಂತ ಕಾಂಗ್ರೆಸ್ ನಶಿಸಿ ಹೋಗುತ್ತಿದೆ. ಸಂಪೂರ್ಣ ನೆಲಕಚ್ಚಿದೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 21 ಸ್ಥಾನ ಪಡೆದಿದೆ. ವಿರೋಧ ಪಕ್ಷದ ನಾಯಕ ಆಗಲೂ ಲಾಯಕ್ಕಿಲ್ಲದಂಥ ಸ್ಥಿತಿಗೆ ಕಾಂಗ್ರೆಸ್​ನವರು ತಲುಪಿದ್ದಾರೆ. ಕಾಂಗ್ರೆಸ್ ಅನ್ನು ನೆಚ್ಚಿಕೊಂಡು ಹೋದರೆ ಪ್ರಾದೇಶಿಕ ಪಕ್ಷಗಳು ಮುಳುಗಿ ಹೋಗಲಿವೆ. ಮಹಾರಾಷ್ಟ್ರ ಚುನಾವಣೆ ಫಲಿತಾಂಶವೇ ಇದಕ್ಕೆ ನಿದರ್ಶನ.

| ಪ್ರಲ್ಹಾದ ಜೋಶಿ ಕೇಂದ್ರ ಸಚಿವ