| ಮೃತ್ಯುಂಜಯ ಕಪಗಲ್ ಬೆಂಗಳೂರು
ಕರೊನಾ ಮೊದಲ ಅಲೆಯಿಂದ ಚೇತರಿಸಿಕೊಳ್ಳುವ ಹಂತದಲ್ಲೇ ರಾಜ್ಯದ ಆರ್ಥಿಕತೆಗೆ "ಜನತಾ ಕರ್ಫ್ಯೂ' ಅಡ್ಡಗಾಲಾಗಿ ಎದುರಾಗಿದೆ. ರಾಜ್ಯವು ಉದ್ಯಮ-ತಯಾರಿಕಾ ವಲಯ ಸ್ನೇಹಿಯಾಗಿದ್ದರೂ ಕೋವಿಡ್ ತಡೆಗಾಗಿ ಕೈಗೊಂಡಿರುವ ಬಿಗಿಕ್ರಮಗಳಿಂದಾಗಿ ಬೊಕ್ಕಸಕ್ಕೆ ಹೊಡೆತ ಬೀಳುವ ಆತಂಕ ಕಾಡಲಾರಂಭಿಸಿದೆ. ಕರೊನಾ ಮಹಾಮಾರಿ ಸೋಂಕಿನ ಹಾವಳಿ ಹೆಚ್ಚಿಸಿ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ. ಪರಿಸ್ಥಿತಿಯ ಗಂಭೀರತೆ ಅರಿತು ಜಾರಿಗೊಳಿಸಿರುವ ಕಠಿಣ ಕ್ರಮಗಳಿಂದಾಗಿ ಹಾಸಿಗೆಗಳು, ವೆಂಟಿಲೇಟರ್, ಐಸಿಯು, ಆಕ್ಸಿಜನ್, ಔಷಧ ಮುಂತಾದ ತುರ್ತು ಅಗತ್ಯಗಳನ್ನು ಹೊಂದಿಸಿಕೊಳ್ಳಲು ಸರ್ಕಾರಕ್ಕೆ ಕಾಲಾವಕಾಶ ಸಿಕ್ಕಿದಂತಾಗಿದೆ. 14 ದಿನಗಳ ಅವಧಿಯ ಕ್ಲೋಸ್ ಡೌನ್ಗೆ ಸೋಂಕಿನ ಉಪಟಳ ತಗ್ಗಿದರೆ ಸರಿ. ಇಲ್ಲವಾದರೆ ಈ ನಿರ್ಧಾರವನ್ನು ಇನ್ನಷ್ಟು ದಿನ ವಿಸ್ತರಿಸಬೇಕಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ತಜ್ಞರು ಅಂದಾಜಿಸಿದ ಪ್ರಕಾರ ಮೇ ಮಧ್ಯಭಾಗದವರೆಗೂ 2ನೇ ಅಲೆಯ ಪ್ರಭಾವ ಪ್ರಖರವಾಗಿರಲಿದ್ದು, ಮೇ ಅಂತ್ಯದ ನಂತರ ಕ್ರಮೇಣ ಇಳಿಯಬಹುದು. ಹೀಗಾಗಿ ಜನತಾ ಕರ್ಫ್ಯೂವನ್ನು ಮತ್ತೊಮ್ಮೆ ವಿಸ್ತರಿಸುವ ಸಾಧ್ಯತೆ ದಟ್ಟವಾಗಿದೆ.
ಬದ್ಧತಾ ವೆಚ್ಚದ ಚಿಂತೆ: ಜನರ ಜೀವ-ಜೀವನೋಪಾಯದ ಸುರಕ್ಷತೆ ಜತೆಗೆ ಅಗತ್ಯ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಂಬಳ, ಪಿಂಚಣಿ ಇನ್ನಿತರ ಬದ್ಧತಾ ವೆಚ್ಚ ಸರಿದೂಗಿಸುವುದು ಸಿಎಂ ಯಡಿಯೂರಪ್ಪ ಎದುರಿರುವ ದೊಡ್ಡ ಸವಾಲು. ಕಳೆದ ವರ್ಷ ಬದ್ಧತಾ ವೆಚ್ಚ ಸರಿದೂಗಿಸಲೆಂದು ಹೆಚ್ಚುವರಿಯಾಗಿ 57,000 ಕೋಟಿ ರೂ. ಸಾಲ ಮಾಡಬೇಕಾಯಿತು. ಕೇಂದ್ರ ಸರ್ಕಾರದ ನೆರವಿನ ಭರವಸೆಯು ಈ ಸಾಹಸಕ್ಕೆ ಕೈಹಾಕಲು ಪ್ರೇರೇಪಿಸಿತು. ಆದರೆ 2ನೇ ಅಲೆ ಕಾಲಿಟ್ಟ ಸಂದರ್ಭದಲ್ಲಿ ಆರ್ಥಿಕ ನೆರವಿನ ವಿಚಾರದಲ್ಲಿ ಕೇಂದ್ರದ ನಿಲುವು ಏನೆಂಬುದು ಗೊತ್ತಾಗಿಲ್ಲ. ಹೆಚ್ಚುವರಿ ಸಾಲ ಕಷ್ಟ, ಸ್ವಂತ ಆರ್ಥಿಕ ಸಂಪನ್ಮೂಲ ನಿರೀೆಯಂತೆ ಹುಟ್ಟದಿದ್ದರೆ ಇನ್ನೂ ಕಷ್ಟ ಎಂಬಂತಹ ಅಡಕತ್ತರಿಗೆ ಬಿಎಸ್ವೈ ಸಿಲುಕಿದ್ದಾರೆ. ಮೊದಲ ಸುದೀರ್ಘ ಲಾಕ್ ಡೌನ್ನಿಂದಾಗಿ 2020-21ನೇ ಸಾಲಿನಲ್ಲಿ ವಿವಿಧ ಇಲಾಖೆಗಳ ಒಟ್ಟು 19,775 ಕೋಟಿ ರೂ. ಹಾಗೂ ಬಂಡವಾಳ ವೆಚ್ಚದಲ್ಲಿ 4,000 ಕೋಟಿ ರೂ.ಗೂ ಅಧಿಕ ಮೊತ್ತ ಕಡಿತವಾಗಿತ್ತು. ಮುಂದುವರಿದ ಕಾಮಗಾರಿಗಳಿಗೆ ಹಣ ಹೊಂದಿಸಲು ಸರ್ಕಾರ ಹೆಣಗಾಡಿದೆ. ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಹಂತದಲ್ಲಿ ಕರೊನಾ 2ನೇ ಅಲೆ ಎಲ್ಲ ಲೆಕ್ಕಾಚಾರ ತಲೆಕೆಳಗು ಮಾಡಿದ್ದು, ಸಿಎಂ ಬಿಎಸ್ವೈ ಮುಂದಿನ ಹೆಜ್ಜೆ ಕುತೂಹಲ ಕೆರಳಿಸಿದೆ.
ಶುಲ್ಕ ಸಂಗ್ರಹಕ್ಕೆ ಗ್ರಹಣ ಕವಿಯುವ ಆತಂಕ: ಉತ್ಪಾದನೆ, ತಯಾರಿಕೆ, ನಿರ್ಮಾಣ, ಮಾಹಿತಿ&ತಂತ್ರಜ್ಞಾನ ಸೇರಿದಂತೆ ಕೆಲವು ವಲಯಗಳಿಗೆ ವಿನಾಯಿತಿ ನೀಡಲಾಗಿದೆ. ಆಟೋಮೊಬೈಲ್, ಶಾಪಿಂಗ್ ಮಾಲ್, ವ್ಯಾಪಾರ, ಸಿದ್ಧ ಉಡುಪು ಇನ್ನಿತರ ಕೆಲವು ಕ್ಷೇತ್ರಗಳಿಗೆ ವಿಧಿಸಿದ ರ್ನಿಬಂಧದ ಪರಿಣಾಮ ಪರೋಕ್ಷ ಆದಾಯ ಮೂಲಗಳು ಸೊರಗಲಿವೆ. ಹೋಟೆಲ್, ಮದ್ಯದಂಗಡಿಗಳಿಗೆ ಲಭ್ಯ ಪಾರ್ಸೆಲ್ ಅವಕಾಶ ತಕ್ಕಮಟ್ಟಿಗೆ ಆದಾಯ ತರಬಹುದು. ಅಬಕಾರಿ ಹೊರತುಪಡಿಸಿ ಸರ್ಕಾರದ ನೇರ ಆದಾಯ ಮೂಲಗಳಾದ ಸಾರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹಕ್ಕೆ ಹೊಡೆತ ಬೀಳಲಿದೆ.