ನ್ಯೂಸ್

ತೈವಾನ್​ನಲ್ಲಿ ಪ್ರಬಲ ಭೂಕಂಪನ; ನೋಡ ನೋಡುತ್ತಿದ್ದಂತೆ ಕುಸಿದ ಗುಯಿಶನ್ ದ್ವೀಪದ ಬಂಡೆಗಳು! ಇಲ್ಲಿದೆ ವೀಡಿಯೋ

ತೈಪೈ: ಇಂದು ಬೆಳ್ಳಂಬೆಳಗ್ಗೆ ತೈವಾನ್​ನಲ್ಲಿ ಸಂಭವಿಸಿದ ಪ್ರಬಲ ಭೂಕಂಪನದ ಪರಿಣಾಮ ಜಪಾನ್​ನ ಯೊನಾಗುನಿ ದ್ವೀಪದಲ್ಲಿ ಸುನಾಮಿ ಉಂಟಾಯಿತು. 7.4 ರಿಕ್ಟರ್​ ಸ್ಕೇಲ್​ನಲ್ಲಿ ತೀವ್ರತೆಯ ಭೂಕಂಪನ ದಾಖಲಾಗಿದ್ದು, 25 ವರ್ಷದ ಬಳಿಕ ತೈವಾನ್​ನಲ್ಲಿ ಭೂಮಿ ಕಂಪಿಸಿದೆ. ಈ ಹಿಂದೆ 1999ರಲ್ಲಿ ಪ್ರಬಲ ಭೂಕಂಪನವಾಗಿ 2500ಕ್ಕೂ ಅಧಿಕ ಮಂದಿ ಸಾವಿಗೀಡಾಗಿ 1300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

7.4 ರಿಕ್ಟರ್​ ತೀವ್ರತೆಯ ಭೂಕಂಪನಕ್ಕೆ ಇಲ್ಲಿಯವರೆಗೆ 9 ಮಂದಿ ಸಾವನ್ನಪ್ಪಿದ್ದು, 821 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭೂಕಂಪವು ಹುವಾಲಿಯನ್ ಕೌಂಟಿಯಿಂದ ಸುಮಾರು 15 ಮೈಲುಗಳಷ್ಟು ದಕ್ಷಿಣಕ್ಕೆ 8 ಗಂಟೆಗೆ ಕೆಲವೇ ನಿಮಿಷಗಳ ಸಮೀಪದಲ್ಲಿ ಸಂಭವಿಸಿದೆ (ಸ್ಥಳೀಯ ಸಮಯಕ್ಕೆ ಅನುಗುಣವಾಗಿ). ಸೆಂಟ್ರಲ್ ವೆದರ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಐದು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 76 ಗಂಭೀರ ಘಟನೆಗಳನ್ನು ತೈವಾನ್ ದಾಖಲಿಸಿದೆ ಎಂದು ವರದಿಯಾಗಿದೆ.

ತೈವಾನ್‌ನ ಪ್ರಬಲ ಭೂಕಂಪನ ಸಂಭವಿಸಿದ ವೇಳೆ ಗುಯಿಶನ್ ದ್ವೀಪದ ಬಂಡಗೆಳು ಸಮುದ್ರಕ್ಕೆ ಉರುಳಿ ಬಿದ್ದಿವೆ. ಪ್ರತ್ಯಕ್ಷದರ್ಶಿಯೊಬ್ಬರು ತೈವಾನ್‌ನ ದ್ವೀಪದ ಬದಿಯಲ್ಲಿ ಬಂಡೆಗಳು ಉರುಳುತ್ತಿರುವುದನ್ನು ತಮ್ಮ ಕ್ಯಾಮೆರದಲ್ಲಿ ಚಿತ್ರೀಕರಿಸಿದ್ದಾರೆ. ಇದು ಭಾರಿ ಭೂಕಂಪ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಕಂಡುಬಂದ ದೃಶ್ಯ ಎಂದು ಹೇಳಲಾಗಿದೆ,(ಏಜೆನ್ಸೀಸ್).