Nail Loss : ಕೆಲವು ತಿಂಗಳ ಹಿಂದೆ ಮಹಾರಾಷ್ಟ್ರದ ವಿವಿಧ ಹಳ್ಳಿಗಳಲ್ಲಿ 200ಕ್ಕೂ ಹೆಚ್ಚು ಜನರು ಹಠಾತ್ ಕೂದಲು ಉದುರುವಿಕೆ ಸಮಸ್ಯೆ ಎದುರಿಸಿದ್ದಾಗಿ ತಿಳಿಸಿದ್ದರು. ಇದೀಗ ನಾಲ್ಕೈದು ಹಳ್ಳಿಗಳಿಂದ ಸುಮಾರು 29 ಜನರು ದಿಢೀರ್ ಉಗುರು ಉದುರುವಿಕೆ ಸಮಸ್ಯೆ ಅನುಭವಿಸುತ್ತಿರುವುದಾಗಿ ವರದಿಯಾಗಿದೆ. ಅಷ್ಟಕ್ಕೂ ಈ ರೀತಿ ಏಕೆ ಆಗುತ್ತಿದೆ ಅನ್ನೋದೇ ಇಸೀಗ ಗೊಂದಲಮಯವಾಗಿದೆ.
ಬುಲ್ಧಾನಾ ಜಿಲ್ಲೆಯ ಶೇಗಾಂವ್ ತಾಲೂಕಿನ ಅನೇಕ ನಿವಾಸಿಗಳು ಕೂದಲು ಉದುರುವಿಕೆ ಸಮಸ್ಯೆಗಳನ್ನು ಎದುರಿಸಿದ್ದರು. ಈ ಬಗ್ಗೆ ಅಧ್ಯಯನ ನಡೆಸಿದಾಗ, ಗ್ರಾಮಸ್ಥರು ಸೇವಿಸುತ್ತಿದ್ದ ಗೋಧಿಯಲ್ಲಿರುವ ವಿಷಕಾರಿ ಅಂಶಗಳಿಂದಾಗಿ ಈ ಸ್ಥಿತಿ ಉಂಟಾಗಿದೆ ಎಂಬುದು ಕಂಡುಬಂದಿತ್ತು. ಆದರೂ, ಈ ಒಂದು ನಿಗೂಢತೆಯು ಜನರನ್ನು ಗೊಂದಲಕ್ಕೀಡು ಮಾಡಿದ ಕೆಲವೇ ತಿಂಗಳಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ. ಅದೇನೆಂದರೆ, ಕೆಲ ಜನರಲ್ಲಿ ಇದ್ದಕ್ಕಿದ್ದಂತೆ ಉಗುರುಗಳು ಉದುರುತ್ತಿವೆ. ಇದರಿಂದ ಗ್ರಾಮಸ್ಥರು ಏನಾಗುತ್ತಿದೆ ಅಂತ ಆತಂಕಕ್ಕೀಡಾಗಿದ್ದಾರೆ.
ಶೇಗಾಂವ್ ತಾಲ್ಲೂಕಿನ ನಾಲ್ಕು ಹಳ್ಳಿಗಳಲ್ಲಿ ಸುಮಾರು 29 ಜನರಲ್ಲಿ ಉಗುರು ವಿರೂಪತೆ ಕಂಡುಬಂದಿದೆ. ಕೆಲವು ಸಂದರ್ಭಗಳಲ್ಲಿ, ಉಗುರುಗಳು ಉದುರಿಹೋಗುತ್ತಿವೆ. ಸದ್ಯ ಅವರಿಗೆಲ್ಲ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಪರೀಕ್ಷೆಗಾಗಿ ಶೇಗಾಂವ್‌ನಲ್ಲಿರುವ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ಬುಲ್ಧಾನ ಆರೋಗ್ಯ ಅಧಿಕಾರಿ ಡಾ. ಅನಿಲ್ ಬಂಕರ್ ಅವರು ಸುದ್ದಿ ಸಂಸ್ಥೆ ಪಿಟಿಐಗೆ ಹೇಳಿಕೆ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯ ರಾಮ್ ಥಾರ್ಕರ್ ಅವರ ಪ್ರಕಾರ, ಕಳೆದ ಕೆಲವು ದಿನಗಳಿಂದ ಉಗುರು ಉದುರುವಿಕೆ ಸಮಸ್ಯೆ ಕಾಣಿಸಿಕೊಂಡಿದೆ. ಮೊದಲ ಎರಡು ದಿನಗಳಲ್ಲಿ ಉಗುರುಗಳು ಬಿರುಕು ಬಿಡುತ್ತವೆ ಮತ್ತು ನಂತರ ಅವು ಕೆಳಗೆ ಬೀಳುತ್ತವೆ. ಈ ಮಾಹಿತಿಯನ್ನು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಆಯುಷ್ ಸಚಿವ ಪ್ರತಾಪ್‌ರಾವ್ ಜಾಧವ್ ಅವರಿಗೆ ತಿಳಿಸಲಾಗಿದೆ. ಆರೋಗ್ಯ ಅಧಿಕಾರಿಗಳ ತಂಡವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ ಎಂದು ಹೇಳಿದ್ದಾರೆ.
ಜಿಲ್ಲಾ ಮನೋವೈದ್ಯಾಧಿಕಾರಿ ಪ್ರಶಾಂತ್ ತಾಂಗ್ಡೆ ಅವರ ಪ್ರಕಾರ, 30ಕ್ಕೂ ಹೆಚ್ಚು ಜನರ ಉಗುರುಗಳು ಹಾನಿಗೊಳಗಾಗಿದ್ದು, ರಕ್ತದ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ. ಈ ಸಮಸ್ಯೆಯ ಕಾರಣವನ್ನು ಇನ್ನೂ ಗುರುತಿಸಲಾಗಿಲ್ಲವಾದರೂ, ಕೂದಲು ಉದುರುವಿಕೆಯಿಂದ ಬಳಲುತ್ತಿರುವವರು ಉಗುರು ಉದುರುವಿಕೆಯ ಸಮಸ್ಯೆಗಳನ್ನು ಅನುಭವಿಸುತ್ತಿರುವುದರಿಂದ ಇದು ಹೆಚ್ಚಿನ ಸೆಲೆನಿಯಮ್ ಕಾರಣದಿಂದ ಸಂಬಂಧಿಸಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಅಂದಹಾಗೆ, ಸೆಲೆನಿಯಮ್ ಮಣ್ಣು, ನೀರು ಮತ್ತು ಕೆಲವು ಆಹಾರಗಳಲ್ಲಿ ಕಂಡುಬರುವ ಖನಿಜವಾಗಿದೆ. 2024ರ ಡಿಸೆಂಬರ್ ತಿಂಗಳಿಂದ ಈ ವರ್ಷದ ಜನವರಿ ನಡುವೆ, ಬುಲ್ಧಾನಾದ 18 ಹಳ್ಳಿಗಳ 279 ಜನರು ಹಠಾತ್ ಕೂದಲು ಉದುರುವಿಕೆಯನ್ನು ಅನುಭವಿಸಿದರು. ಈ ಸಂಬಂಧ ಮಾಧ್ಯಮಗಳಲ್ಲಿ ವರದಿ ಕೂಡ ಆಯಿತು. ಬಳಿಕ ಡಾ.ಹಿಮಂತ್ರಾವ್ ಬವಾಸ್ಕರ್ ನೇತೃತ್ವದಲ್ಲಿ ಅಧ್ಯಯನ ನಡೆಯಿತು.
ಪಂಜಾಬ್ ಮತ್ತು ಹರಿಯಾಣದಿಂದ ರಫ್ತು ಮಾಡಿಕೊಂಡ ಗೋಧಿ ಸ್ಥಳೀಯ ಗೋಧಿಗಿಂತ 600 ಪಟ್ಟು ಸೆಲಿನಿಯಮ್ ಇದೆ ಎಂದು ತನಿಖೆಯಿಂದ ಧೃಢಪಟ್ಟಿತು. ಈ ಅಧಿಕ ಸೆಲೆನಿಯಮ್ ಕಾರಣದಿಂದಾಗಿ, ಸಂತ್ರಸ್ತರ ಕೂದಲು ಎರಡರಿಂದ ಮೂರು ದಿನದೊಳಗೆ ಎಲ್ಲ ಕೂದಲುಗಳು ಉದುರುತ್ತವೆ. ಅಲ್ಲದೆ, ರಕ್ತ, ಮೂತ್ರ ಮತ್ತು ಕೂದಲಿನ ಪರೀಕ್ಷೆಗಳು ಸಹ ಅಸಜವಾಗಿ ಹೆಚ್ಚಿನ ಮಟ್ಟದಲ್ಲಿ ಸೆಲೆನಿಯಂ ಕಂಡುಬಂದಿದೆ. ಹೆಚ್ಚಿನ ಮಟ್ಟದ ಸೆಲೆನಿಯಂ ಕಾರಣದಿಂದಾಗಿ ದೇಹದಲ್ಲಿ ಪೌಷ್ಟಿಕಾಂಶದ ಅಸಮತೋಲನವನ್ನು ಸೂಚಿಸುತ್ತದೆ ಎಂದು ಅಧ್ಯಯನ ವರದಿ ಬಹಿರಂಗಪಡಿಸಿತು. ಇದೀಗ ಉಗುರುಗಳು ಉದುರುತ್ತಿರುವುದಕ್ಕೂ ಅದೇ ಕಾರಣ ಎಂದು ಹೇಳಲಾಗುತ್ತಿದೆ.
ಸೆಲೆನಿಯಮ್ ಒಂದು ಪ್ರಕಾರದ ಖನಿಜವಾಗಿದ್ದು, ಅದು, ಮಣ್ಣು, ನೀರು ಮತ್ತು ಕೆಲವು ಆಹಾರಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ. ದೇಹದಲ್ಲಿ ಚಯಾಪಯ ಕ್ರಿಯೆಯನ್ನು ನಿಯಂತ್ರಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಇದು ಹೆಚ್ಚುವರಿ ಪ್ರಮಾಣವು ಆರೋಗ್ಯಕ್ಕೆ ಹಾನಿಕಾರವಾಗಿದೆ ಎಂದು ತಜ್ಞರು ಹೇಳುತ್ತಾರೆ.(ಏಜೆನ್ಸೀಸ್)