Belonging: A journey of love: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ 'ಬೆಲಾಂಗಿಂಗ್: ಎ ಜರ್ನಿ ಆಫ್ ಲವ್' ಆತ್ಮಕಥೆ ಮಂಗಳವಾರ ಅಧಿಕೃತವಾಗಿ ಮಾರುಕಟ್ಟೆಗೆ ಬಂದಿದೆ. ಈ ವಿಶೇಷ ಕ್ಷಣವನ್ನು ಸ್ಮರಣೀಯವಾಗಿಸಲು ದೆಹಲಿಯಲ್ಲಿ ಮುಂದಿನ ವಾರ ಪ್ರಮುಖ ಕಾರ್ಯಕ್ರಮ ನಡೆಯಲಿದೆ.
ನವೆಂಬರ್ 16 ಕ್ಕೆ ದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಇವೆಂಟ್ ನಿಗದಿಯಾಗಿದೆ. ಸೋನಿಯಾ ಗಾಂಧಿ ಅವರ ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಗಾಂಧಿ ಕುಟುಂಬದ ಆಪ್ತ ಆಹ್ವಾನಿತರಿಗಷ್ಟೇ ಇಲ್ಲಿ ಅವಕಾಶ ನೀಡಲಾಗಿದೆ.
ಇಟಲಿಯ ಹುಟ್ಟಿನಿಂದ ಹಿಡಿದು ಭಾರತದ ರಾಜಕೀಯ ಅಧಿಕಾರದವರೆಗೆ ಸೋನಿಯಾ ಅವರ ಜೀವನಯಾನವನ್ನು 544 ಪುಟಗಳಲ್ಲಿ ಹಾರ್ಪರ್ ಕಾಲಿನ್ಸ್ ಸಂಸ್ಥೆ ಮುದ್ರಿಸಿದೆ. ನೆಹರೂ ಅವರ 1936 ರ 'ಆನ್ ಆಟೋಬಯೋಗ್ರಫಿ' ನಂತರ ನೆಹರೂ-ಗಾಂಧಿ ಮನೆತನದಿಂದ ಹೊರಬರುತ್ತಿರುವ ಎರಡನೇ ಆತ್ಮಕಥೆ ಇದಾಗಿದೆ.
2010 ರಲ್ಲಿ ಯುಪಿಎ ಸರ್ಕಾರವಿದ್ದಾಗ, ನಾಯಕತ್ವ ಬದಲಾವಣೆಯ ಅಗತ್ಯವಿದೆ ಎಂದು ಪ್ರಣಬ್ ಮುಖರ್ಜಿ ಸಲಹೆ ನೀಡಿದ್ದರು. ಇದು ತಾವು ಪ್ರಧಾನಿಯಾಗಬೇಕು ಎಂಬ ಅವರ ಬಯಕೆಯ ಸುಳಿವಾಗಿತ್ತು ಎಂದು ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಬಹಿರಂಗಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಮಗೆ ನೇರ ಸಂಪರ್ಕ ತೀರಾ ಕಡಿಮೆ ಇತ್ತು ಎಂದಿರುವ ಅವರು, ಕೆಲವೊಂದು ಸಂಗತಿಗಳಲ್ಲಿ ಪರಸ್ಪರ ಸಮಾನ ನಿಲುವುಗಳಿದ್ದವು ಎಂಬುದನ್ನು ಉಲ್ಲೇಖಿಸಿದ್ದಾರೆ.
ಯುಪಿಎ ಆಡಳಿತದ ಅವಧಿಯಲ್ಲಿ ತಾವು ಸರ್ಕಾರದ ಸೂತ್ರಧಾರಿಯಾಗಿದ್ದೆ ಎಂಬ ಆರೋಪವನ್ನು ನಿರಾಕರಿಸಿರುವ ಸೋನಿಯಾ, ತಾವು 'ಬ್ಯಾಕ್ ಸೀಟ್ ಡ್ರೈವರ್' ಆಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)