ಮುಂಬೈ: ಮದುವೆಯಾದ ಬಳಿಕ ಬಾಲಿವುಡ್ ಚಿತ್ರರಂಗದಿಂದ ಸದ್ಯ ದೂರ ಉಳಿದಿರುವ ನಟಿ ಸೋನಂ ಕಪೂರ್ (Sonam Kapoor), ಪತಿ ಮತ್ತು ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಈ ಮಧ್ಯೆ ತಮ್ಮನ್ನು ಹುಡುಕಿಕೊಂಡು ಬರುತ್ತಿರುವ ಪ್ರಾಜೆಕ್ಟ್ಗಳನ್ನು ಬಹಳ ಯೋಚಿಸಿ, ಪತಿಯೊಂದಿಗೆ ಚರ್ಚಿಸಿದ ಬಳಿಕವೇ ಆಯ್ಕೆ ಮಾಡಿಕೊಳ್ಳುತ್ತಿರುವುದು ಅವರ ಹಿಂದಿನ ಸಿನಿ ಫಾರ್ಮೆಟ್ ಅನ್ನು ಸಂಪೂರ್ಣವಾಗಿ ಬದಲಾಯಿಸಿದೆ.
ಇದನ್ನೂ ಓದಿ: ಕಾಪು ಕ್ಷೇತ್ರಕ್ಕೆ ದಕ್ಷಿಣ ವಾಹಿನಿ ಹೊರೆಕಾಣಿಕೆ 22ರಂದು ನಡೆಯಲಿರುವ ಮೆರವಣಿಗೆ – ವಲಯ, ಗ್ರಾಮ ಸಮಿತಿಗಳ ರಚನೆ
ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿ ಹಲವು ವಿಷಯಗಳನ್ನು ಮುಕ್ತವಾಗಿ ಮಾತನಾಡಿದ ಸೋನಂ, "ನಾನು ಮದುವೆಯಾದ ಬಳಿಕ ಬಹಳಷ್ಟು ಬದಲಾದೆ. ಈಗ ನನಗೆ ಇಷ್ಟವಿಲ್ಲದ ವ್ಯಕ್ತಿಗಳೊಂದಿಗೆ ಕೆಲಸ ಮಾಡೋದಿಲ್ಲ. ಅದರಲ್ಲೂ ಮಗು ಆದ ನಂತರ ಸಾಕಷ್ಟು ವಿಷಯದಲ್ಲಿ ನನ್ನನ್ನು ಬದಲಾಯಿಸಿಕೊಂಡಿದ್ದೇನೆ" ಎಂದಿದ್ದಾರೆ.
"ತಾಯಿ ಆಗುವುದು ನನ್ನನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಇದು ಮಹಿಳೆಯರನ್ನು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಎಲ್ಲಾ ರೀತಿಯಲ್ಲಿಯೂ ಹೊಸ ಆಯಾಮ ನೀಡುತ್ತದೆ. ಪ್ರತಿಯೊಬ್ಬ ತಾಯಿಗೂ, ಅವರವರ ಮಕ್ಕಳೇ ಮೊದಲ ಆದ್ಯತೆ. ನನ್ನ ಮಗನನ್ನು ನೋಡಿಕೊಳ್ಳುವುದು ನನಗೆ ಬಹಳ ಮುಖ್ಯ. ಇದೆಲ್ಲಾ ಮುಗಿದು ಒಂದಷ್ಟು ಸಮಯ ಸಿಕ್ಕರೆ ಮಾತ್ರ ಸಿನಿಮಾಗಳನ್ನು ಮಾಡುವತ್ತ ಯೋಚಿಸುತ್ತಿದ್ದೇನೆ" ಎಂದರು.
"ನನ್ನ ವೈಯಕ್ತಿಕ ಜೀವನ ತುಂಬಾ ಚೆನ್ನಾಗಿದೆ. ಪತಿ ಮತ್ತು ಮಕ್ಕಳೇ ನನ್ನ ಪ್ರಪಂಚ. ನಾನು ಸಿನಿಮಾಗಳಲ್ಲಿಯೂ ನಟಿಸುತ್ತೇನೆ. ನನ್ನನ್ನು ನಂಬುವ ಮತ್ತು ನನ್ನೊಂದಿಗೆ ಕೆಲಸ ಮಾಡುವುದನ್ನು ಆನಂದಿಸುವ ನಿರ್ದೇಶಕರೊಂದಿಗೆ ಮಾತ್ರವೇ ನಾನು ಸಿನಿಮಾ ಮಾಡಲು ಬಯಸುವುದು. ಹೀರೋಯಿನ್ ಆಗಿ ಬಿಡುವಿಲ್ಲದ ದಿನಗಳಲ್ಲಿಯೂ ನಾನು ಇದನ್ನೇ ಅನುಸರಿಸುತ್ತಿದ್ದೆ. ಈಗಲೂ ಅದನ್ನೇ ಫಾಲೋ ಮಾಡ್ತಿದ್ದೀನಿ" ಎಂದು ಹೇಳಿದರು.
"ಒಬ್ಬ ವ್ಯಕ್ತಿಯಾಗಿ ನನ್ನನ್ನು ನೋಡಲು, ಬೆಳೆಸಲು ಸಹಾಯ ಮಾಡುವ ಕೆಲವೇ ಕೆಲವು ಜನರೊಂದಿಗೆ ನಾನು ಕೈಜೋಡಿಸಲು ಬಯಸುತ್ತೀನಿ. ನನಗೆ ಯಾರಾದರೂ ಸರಿಯಿಲ್ಲ ಅಥವಾ ಇಷ್ಟ ಆಗಲಿಲ್ಲ ಎಂದರೆ ಖಂಡಿತ ಅವರೊಂದಿಗೆ ಕೆಲಸ ಮಾಡುವುದಿಲ್ಲ ಮತ್ತು ತುಂಬಾ ಕಷ್ಟ ಕೂಡ ಆಗುತ್ತೆ. ನಾನು ಯಾವ ರೀತಿಯ ಕಥೆಗಳನ್ನು ಆರಿಸಿಕೊಳ್ಳಬೇಕು ಎಂಬುದರ ಬಗ್ಗೆ ಈಗ ಹೆಚ್ಚು ಗಮನ ಹರಿಸುತ್ತಿದ್ದೇನೆ" ಎಂದು ಸೋನಮ್ ಹೇಳಿದ್ದಾರೆ,(ಏಜೆನ್ಸೀಸ್).