ಶ್ರೀನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ನೇಹಕೂಟ ಕಾರ್ಯಕ್ರಮದಲ್ಲಿ ವಿಆರ್​ಎಲ್ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರನ್ನು ಉದ್ಯಮಿಗಳು ಗೌರವಿಸಿದರು. 
ನ್ಯೂಸ್

ಜಮ್ಮು-ಕಾಶ್ಮೀರ ಬಳಿಕ ಲಡಾಕ್, ಕಾರ್ಗಿಲ್​ನಲ್ಲೂ ವಿಆರ್​ಎಲ್: ಭಾರತದ ಅತಿದೊಡ್ಡ ಲಾಜಿಸ್ಟಿಕ್ಸ್-ಸಾರಿಗೆ ಕಂಪನಿ; ಡಾ. ವಿಜಯ ಸಂಕೇಶ್ವರ ಅವರಿಗೆ ವಿವಿಧ ಸಂಸ್ಥೆಗಳಿಂದ ಸನ್ಮಾನ

ನವದೆಹಲಿ: ಭಾರತದ ಅತಿದೊಡ್ಡ ಲಾಜಿಸ್ಟಿಕ್ಸ್ ಮತ್ತು ಸಾರಿಗೆ ಕಂಪನಿಗಳಲ್ಲಿ ಒಂದಾಗಿರುವ ವಿಆರ್​ಎಲ್ ಸಂಸ್ಥೆ ಜಮ್ಮು-ಕಾಶ್ಮೀರದ ವಿವಿಧ ಭಾಗಗಳಲ್ಲಿ ಕಚೇರಿಗಳನ್ನು ತೆರೆದ ನಂತರ ಈಗ ಲೇಹ್-ಲಡಾಕ್​ಗೂ ನೆಲೆ ವಿಸ್ತರಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಲೇಹ್​ನಲ್ಲಿ

ವಿಆರ್​ಎಲ್ ಸಾರಿಗೆ ಸಂಸ್ಥೆ ತನ್ನ ಕಚೇರಿ ಆರಂಭಿಸಲಿದ್ದು, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಮಂತ್ರದೊಂದಿಗೆ ತನ್ನ ಯಶಸ್ವಿ ಪಯಣ ಮುಂದುವರಿಸುತ್ತಿದೆ. ಗಡಿಭಾಗ ಕಾರ್ಗಿಲ್​ನಲ್ಲೂ ಸ್ಥಳ ಗುರುತಿಸಲಾಗಿದ್ದು, ಅಲ್ಲೂ ಕಚೇರಿ ತೆರೆಯುವ ತೀರ್ಮಾನವಾಗಿದೆ.

ಸದ್ಯ ಜಮ್ಮುವಿನಲ್ಲಿ ಮೂರು ಲಾಜಿಸ್ಟಿಕ್ ಕಚೇರಿಗಳಿದ್ದು, ಕಾಶ್ಮೀರದ ಅನಂತ್​ನಾಗ್, ಕುಪ್ವಾರಾ, ಸಂಗಂ, ಕಥುವಾ, ಸಂಗ್ರಾಂ, ಸಾಂಬಾ ಸೇರಿ 10ಕ್ಕಿಂತಲೂ ಹೆಚ್ಚು ಕಡೆ ವಿಆರ್​ಎಲ್ ಕಚೇರಿಗಳ ಮೂಲಕ ಗ್ರಾಹಕರಿಗೆ ಲಾಜಿಸ್ಟಿಕ್ ಸೇವೆಗಳನ್ನು ಒದಗಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಾಶ್ಮೀರದ ಶ್ರೀನಗರದಲ್ಲಿ ವಿಆರ್​ಎಲ್ ಸಂಸ್ಥೆ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು

ವಿಆರ್​ಎಲ್​ನ ಗ್ರಾಹಕರಿಗೆಂದೇ ವಿಶೇಷ ಪರಸ್ಪರ ಸ್ನೇಹಕೂಟ ಏರ್ಪಡಿಸಿದ್ದರು. ಇದರಲ್ಲಿ 350ಕ್ಕಿಂತಲೂ ಹೆಚ್ಚು ಗ್ರಾಹಕರು ಭಾಗಿಯಾಗಿದ್ದರು. ಲಾಜಿಸ್ಟಿಕ್ ಮತ್ತು ಸಾರಿಗೆ ಸಂಸ್ಥೆಯೊಂದು ಇದೇ ಮೊದಲ ಬಾರಿಗೆ ಇಂಥದ್ದೊಂದು ಸ್ನೇಹಕೂಟವನ್ನು ಶ್ರೀನಗರದಲ್ಲಿ ಏರ್ಪಡಿಸಿದ್ದರ ಬಗ್ಗೆ ಗ್ರಾಹಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು.

ಜಮ್ಮು-ಕಾಶ್ಮೀರ ಚೆೇಂಬರ್ ಆಫ್ ಕಾಮರ್ಸ್, ಟ್ರೇಡರ್ಸ್ ಅಸೋಸಿಯೇಷನ್, ಸೋಪೋರ್ ಟ್ರೇಡರ್ಸ್ ಅಸೋಸಿಯೇಷನ್, ಜೆ ಆಂಡ್ ಕೆ ಟ್ರಾನ್ಸ್​ಪೋರ್ಟ್ ಅಸೋಸಿಯೇಷನ್ ಸೇರಿ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಈ ಸಂಸ್ಥೆಗಳ ಅಧ್ಯಕ್ಷರು ವಿಆರ್​ಎಲ್ ಚೆೇರ್ಮನ್ ಡಾ. ವಿಜಯ ಸಂಕೇಶ್ವರ ಅವರನ್ನು ಸನ್ಮಾನಿಸಿದರು.

1200 ಬ್ರಾಂಚ್, 6200 ಟ್ರಕ್: ಸ್ನೇಹಕೂಟದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಡಾ. ವಿಜಯ ಸಂಕೇಶ್ವರ ಅವರು, ಸದ್ಯ ದೇಶಾದ್ಯಂತ ವಿಆರ್​ಎಲ್​ನ 1200 ಬ್ರಾಂಚ್​ಗಳಿದ್ದು(ಶಾಖೆ), ಸಂಸ್ಥೆಯಲ್ಲಿ 6200 ಟ್ರಕ್​ಗಳಿವೆ. 9000 ಡ್ರೖೆವರ್​ಗಳು, 6000 ಕಾರ್ವಿುಕರು ಹಾಗೂ ಇತರ ಸಾವಿರಾರು ಸಿಬ್ಬಂದಿ ವರ್ಗ ಕೆಲಸ ಮಾಡುತ್ತಿದ್ದಾರೆ. ದೇಶದ ಮೂಲೆ ಮೂಲೆಗೆ ವಿಆರ್​ಎಲ್ ತಲುಪಲು ನಮಗೆ ಕನಿಷ್ಠ 15-20 ವರ್ಷ ಬೇಕಾಗುತ್ತದೆ. ಉದಾಹರಣೆಗೆ ನಾವು ಉತ್ತರ ಪ್ರದೇಶದಲ್ಲಿ 50 ಬ್ರಾಂಚ್​ಗಳನ್ನು ಹೊಂದಿದ್ದೇವೆ. ವಾಸ್ತವದಲ್ಲಿ, ಜನಸಂಖ್ಯೆ ಆಧಾರದಲ್ಲಿ ಹೇಳುವುದಾದರೆ ಕನಿಷ್ಠ 300 ಬ್ರಾಂಚ್​ಗಳಾದರೂ ಉತ್ತರ ಪ್ರದೇಶದಲ್ಲಿರಬೇಕು. ಕಾಶ್ಮೀರದಲ್ಲಿ ಒಂದು ವರ್ಷದ ಹಿಂದೆ ಸೇವೆ ಆರಂಭಿಸಿದ್ದು, 5 ಬ್ರಾಂಚ್​ಗಳನ್ನು ಹೊಂದಿದ್ದೇವೆ. ಕರೊನಾ ಮಹಾಮಾರಿಯಿಂದಾಗಿ 3 ವರ್ಷ ನಾವು ಎಲ್ಲೂ ಬ್ರಾಂಚ್​ಗಳನ್ನು ತೆರೆದಿರಲಿಲ್ಲ. ಕರೊನಾದಿಂದಾಗಿ ಸಾಕಷ್ಟು ಆರ್ಥಿಕ ಸವಾಲು ಎದುರಾಗಿತ್ತು. ಟ್ರಾನ್ಸ್ ಪೋರ್ಟ್ ಕ್ಷೇತ್ರ ಕಠಿಣ ಸವಾಲುಗಳನ್ನು ತಂದೊಡ್ಡುವ ಕ್ಷೇತ್ರವಾಗಿದ್ದು, ಇಲ್ಲಿ ಆರ್ಥಿಕ ಶಿಸ್ತು ಅತ್ಯಂತ ಮುಖ್ಯ ಎಂದು ತಿಳಿಸಿದರು.

ಹಲವು ಸವಾಲು: ಎಲ್ಲ ಉದ್ಯಮದಲ್ಲಿ ಲಾಭ-ನಷ್ಟ ಇದ್ದದ್ದೇ. ಸಾರಿಗೆ ಕ್ಷೇತ್ರ ಕೂಡ ಇದರಿಂದ ಹೊರತಾಗಿಲ್ಲ. ಆರಂಭದಲ್ಲಿ ನಷ್ಟವಾಗುವುದು ಸಹಜವೇ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಸಲುವಾಗಿ ಕೆಲವೊಮ್ಮೆ ಖಾಲಿ ಗಾಡಿಗಳನ್ನೂ ಕಳುಹಿಸುವ ಸನ್ನಿವೇಶ ಬರುತ್ತದೆ. ರೇಟ್ ಕಾಂಪಿಟೇಷನ್ ಸೇರಿ ಹತ್ತು ಹಲವು ಸವಾಲು ನಮ್ಮ ಮುಂದಿವೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ವಿಧಿ 370 ನಿಷ್ಕ್ರಿಯಗೊಳಿಸಿದ ವಿಚಾರಕ್ಕೂ ನಮ್ಮ ಉದ್ಯಮಕ್ಕೂ ಸಂಬಂಧವಿಲ್ಲ. ಏಕೆಂದರೆ, ಅದಕ್ಕಿಂತ ಮೊದಲೇ ನಾವು ಜಮ್ಮುವಿನಲ್ಲಿ ಸೇವೆ ಆರಂಭಿಸಿದ್ದೆವು. ಕಾಶ್ಮೀರದಲ್ಲಿ ಕಚೇರಿ ತೆರೆಯಲು ಹಲವು ತಾಂತ್ರಿಕ ಸಮಸ್ಯೆಗಳಿದ್ದವು. ಈಗ ಪರಿಸ್ಥಿತಿ ಸುಧಾರಿಸಿದೆ ಎಂದು ಡಾ. ವಿಜಯ ಸಂಕೇಶ್ವರ ವಿವರಿಸಿದರು.

ಉತ್ತಮ ಬೆಂಬಲ: ಮೊದಲ ದಿನದಿಂದಲೂ ಜಮ್ಮು-ಕಾಶ್ಮೀರದ ಉದ್ಯಮ ಸಮುದಾಯದಿಂದ ನಮಗೆ ಉತ್ತಮ ಬೆಂಬಲ, ಸಹಕಾರ ಸಿಗುತ್ತಿದೆ. ನಿರೀಕ್ಷೆಗಿಂತಲೂ ಮೀರಿ ನಮಗೆ ಲಾಜಿಸ್ಟಿಕ್ ಸೇವೆ ನೀಡಲು ಸಾಧ್ಯವಾಗಿದೆ. ಗ್ರಾಹಕರ ಪ್ರತಿಕ್ರಿಯೆಯೂ ಚೆನ್ನಾಗಿದೆ. ಕಳೆದ 48 ವರ್ಷಗಳಲ್ಲಿ ವಿಆರ್​ಎಲ್ ಸಂಸ್ಥೆ ತನ್ನ ನೌಕರ ಮತ್ತು ಗ್ರಾಹಕ ವರ್ಗಕ್ಕೆ ಯಾವುದೇ ರೀತಿಯ ನಷ್ಟವಾಗದಂತೆ ನೋಡಿಕೊಂಡು ಬಂದಿದೆ. ಗ್ರಾಹಕರ ಸರಕಿಗೆ ಹಾನಿಯಾಗದಂತೆ ಎಚ್ಚರ ವಹಿಸಲಾಗಿದೆ. ಅಪಘಾತ, ಕಳ್ಳತನದ ಸಂದರ್ಭದಲ್ಲೂ ಸಂಸ್ಥೆಯಿಂದ ಸೂಕ್ತ ಪರಿಹಾರ ಒದಗಿಸಲಾಗಿದೆ. ಈ ವಿಶ್ವಾಸಾರ್ಹತೆ ಉಳಿಸಿ ಕೊಂಡಿರುವುದರಿಂದಲೇ ಗ್ರಾಹಕರು ನಮ್ಮನ್ನು ನೆಚ್ಚಿಕೊಂಡಿದ್ದಾರೆ ಎಂದು ಡಾ. ವಿಜಯ ಸಂಕೇಶ್ವರ ಸಂತಸ ಹಂಚಿಕೊಂಡರು.