ನ್ಯೂಸ್

ಉದ್ಯೋಗಿಯ ಶವವನ್ನು ಛತ್ರಿಗಳಿಂದ ಮುಚ್ಚಿಟ್ಟು ವ್ಯಾಪಾರ ಮಾಡಿದ ಸೂಪರ್​ಮಾರ್ಕೆಟ್​

ನೌಕರನೋರ್ವ ಮೃತಪಟ್ಟಿದ್ದರೂ ಆತನ ಶವವನ್ನು ಮುಚ್ಚಿಟ್ಟು, ವ್ಯಾಪಾರ ಮುಂದುವರಿಸುವ ಮೂಲಕ ಕ್ಯಾರಿಫೋರ್​ ಸೂಪರ್​ ಮಾರ್ಕೆಟ್​ ಅಮಾನವೀಯತೆ ತೋರಿದೆ.

ಬ್ರೆಜಿಲ್​ನ ಸೂಪರ್​ಮಾರ್ಕೆಟ್​​ನಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಚರ್ಚೆಯಾಗುತ್ತಿದೆ. ಇಲ್ಲಿನ ಉದ್ಯೋಗಿಯೋರ್ವ ಕೆಲಸ ಮಾಡುತ್ತಿದ್ದಾಗಲೇ ಮೃತಪಟ್ಟಿದ್ದಾರೆ. ಹಾಗೆ ಆತ ಸಾವನ್ನಪ್ಪಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದು ಸೂಪರ್​ ಮಾರ್ಕೆಟ್​ನ ಉಳಿದ ಸಿಬ್ಬಂದಿಯ ಕರ್ತವ್ಯವಾಗಿತ್ತು. ಆದರೆ ಹೀಗೊಬ್ಬ ಕೆಲಸಗಾರ ಸತ್ತ ಎಂದು ಸುದ್ದಿಯಾದರೆ ಅಲ್ಲಿದ್ದ ಗ್ರಾಹಕರು ಹೊರಟುಹೋಗಬಹುದು ಎಂದೆಣೆಸಿ ಅಲ್ಲಿಯೇ ಒಂದು ಬದಿಯಲ್ಲಿ ಮೃತ ಕೆಲಸಗಾರನ ಶವವನ್ನು ಇಟ್ಟು, ಮೂರು ಛತ್ರಿಗಳಿಂದ ಮುಚ್ಚಿಡುವ ಮೂಲಕ ಸಿಬ್ಬಂದಿ ಅಮಾನವೀಯತೆ ಪ್ರದರ್ಶನ ಮಾಡಿದ್ದಾರೆ. ಇದನ್ನೂ ಓದಿ:ಶ್ರೀಶೈಲಂ ಜಲವಿದ್ಯುತ್​ ಘಟಕದಲ್ಲಿ ಭೀಕರ ಅಗ್ನಿದುರಂತ; 6 ಮಂದಿ ಸಾವು

ರೆಸೆಫೆಯಲ್ಲಿರುವ ಈ ಸೂಪರ್​ ಮಾರ್ಕೆಟ್​​ನಲ್ಲಿ ಆಗಸ್ಟ್​ 14ರಂದೇ ಘಟನೆ ನಡೆದಿದ್ದರೂ ಅದರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿವೆ.

ಅನೇಕ ನೆಟ್ಟಿಗರು ತಮ್ಮ ಕೋಪ ವ್ಯಕ್ತಪಡಿಸಿದ್ದಾರೆ. ಇದೆಂತಾ ಕ್ರಮ ಎಂದು ಪ್ರಶ್ನಿಸಿದ್ದಾರೆ. ಸೂಪರ್​ ಮಾರ್ಕೆಟ್​ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. (ಏಜೆನ್ಸೀಸ್​)