ಕೇರಳ: 2006ರಲ್ಲಿ ಮಹಿಳೆ ಮತ್ತು ಆಕೆಯ ನವಜಾತ ಅವಳಿ ಹೆಣ್ಣು ಮಕ್ಕಳನ್ನು ಕ್ರೂರವಾಗಿ ಹತ್ಯೆಗೈದ ಆರೋಪದಡಿ ಕಳೆದ 19 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಇಬ್ಬರು ಪುರುಷ ಆರೋಪಿಗಳನ್ನು ಕಡೆಗೂ ಕೇಂದ್ರೀಯ ತನಿಖಾ ದಳ ಶನಿವಾರ (ಜ.04) ಬಂಧಿಸಿದೆ.
ಇದನ್ನೂ ಓದಿ: ದೇಶಕ್ಕೆ ಒಕ್ಕಲಿಗರ ಕೊಡುಗೆ ಅಪಾರ – ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ – ಸಭಾಭವನವನ್ನು ಲೋಕಾರ್ಪಣೆ, ಸತ್ಯನಾರಾಯಣ ಪೂಜೆ
ಈ ಪ್ರಕರಣವು ಫೆಬ್ರವರಿ 10, 2006ರಂದು ಕೊಲ್ಲಂ ಜಿಲ್ಲೆಯ ಆಂಚಲ್‌ನಲ್ಲಿ 24 ವರ್ಷದ ಮಹಿಳೆ ಮತ್ತು ಆಕೆಗೆ ಜನಿಸಿದ 17 ದಿನಗಳ ಅವಳಿ ನವಜಾತ ಹೆಣ್ಣು ಮಕ್ಕಳನ್ನು ಹಂತಕರು ಬರ್ಬರವಾಗಿ ಕೊಲೆ ಮಾಡಿದ್ದರು. ಆರಂಭದಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿತ್ತು. ಜನವರಿ 2010ರಲ್ಲಿ ಕೇರಳ ಹೈಕೋರ್ಟಿನಿಂದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಯಿತು ಮತ್ತು ಫೆಬ್ರವರಿ 6, 2010ರಂದು ಕೇಂದ್ರ ಸಂಸ್ಥೆ ಈ ಪ್ರಕರಣವನ್ನು ಮರು ನೋಂದಣಿ ಮಾಡಿತು.
ಕೊಲ್ಲಂ ನಿವಾಸಿ ದಿವಿಲ್ ಕುಮಾರ್ ಮತ್ತು ಆತನ ಸ್ನೇಹಿತ ರಾಜೇಶ್ ಎಂಬುವರು ಈ ಕೊಲೆ ಮಾಡಿದ್ದಾರೆ ಎಂದು ಸಿಬಿಐ ತನಿಖೆಯಿಂದ ಸ್ಪಷ್ಟವಾಗಿದೆ. ಕೊಲೆ ನಡೆದ ದಿನದಿಂದಲೂ ಈ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದರು. ಸಮಗ್ರ ತನಿಖೆಯ ನಂತರ, ಸಿಬಿಐ ಎರ್ನಾಕುಲಂನ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ಗೆ ಚಾರ್ಜ್‌ಶೀಟ್ ಸಲ್ಲಿಸಿತ್ತು. ಕಾನೂನು ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಲ್ಲದೇ, ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದ ಹಿನ್ನೆಲೆ ಇವರಿಬ್ಬರನ್ನು ಅಪರಾಧಿಗಳು ಎಂದು ಕೋರ್ಟ್ ಘೋಷಿಸಿದೆ.
ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಸಿಬಿಐ ಅಧಿಕಾರಿಗಳು, ಗುಪ್ತಚರ ಮಾಹಿತಿಯ ಮೇರೆಗೆ ದಿವಿಲ್ ಕುಮಾರ್ ಮತ್ತು ರಾಜೇಶ್ ಇಬ್ಬರನ್ನೂ ಪುದುಚೇರಿಯಲ್ಲಿ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಕೊಲೆ ಮಾಡಿದ ನಂತರ ಇಬ್ಬರು ಆರೋಪಿಗಳು ತಮ್ಮ ಗುರುತನ್ನು ಹಲವಾರು ರೀತಿಯಲ್ಲಿ ಮರೆಮಾಚಲು ಪ್ರಯತ್ನಿಸಿದ್ದಾರೆ ಎಂದು ತನಿಖಾ ಸಂಸ್ಥೆ ಬಹಿರಂಗಪಡಿಸಿದೆ.
ದಿವಿಲ್ ಕುಮಾರ್ ತಮ್ಮ ಹೆಸರನ್ನು ವಿಷ್ಣು ಮತ್ತು ರಾಜೇಶ್ ತಮ್ಮ ಹೆಸರನ್ನು ಪ್ರವೀಣ್ ಕುಮಾರ್ ಎಂದು ಬದಲಾಯಿಸಿಕೊಂಡಿದ್ದರು. ಪುದುಚೇರಿಯಲ್ಲಿ ಮದುವೆಯಾಗಿ, ಆಸ್ತಿ ಖರೀದಿಸಿ, ಅಲ್ಲೇ ನೆಲೆಸಿರುವುದು ಸಿಬಿಐ ತನಿಖೆಯಿಂದ ಬೆಳಕಿಗೆ ಬಂದಿದೆ. ಇಬ್ಬರನ್ನೂ ಇಂದು ಎರ್ನಾಕುಲಂನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ನ ಜುರಿಡಿಕ್ಷನಲ್ ಕೋರ್ಟ್‌ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).