ನ್ಯೂಸ್

16ರ ನಂತರ...

kumarvrl

ಬೆಳೆಯುತ್ತಿರುವ ಮಕ್ಕಳಿಗೆ ನಮ್ಮ ಅನುಭವಗಳನ್ನು ಹೇಳಬಹುದಷ್ಟೆ. ಆದರೆ ಅದನ್ನು ಅವರ ಜೀವನದಲ್ಲಿ ಅಳವಡಿಸಿಕೊಳ್ಳಲು ಒತ್ತಡ ತರುವುದು ಸಲ್ಲ. ಏಕೆಂದರೆ ಅವರು ಅದನ್ನ ಕೇಳಿಸಿಕೊಂಡರೂ ಕೆಲವೊಮ್ಮೆ ತಮ್ಮ ಪರಿಸ್ಥಿತಿಗೂ ಅದಕ್ಕೂ ತಾಳೆ ಹಾಕುವುದೇ ಇಲ್ಲ. ಪಾಠ ಕಲಿಯುವ ಮನಸ್ಥಿತಿಯಲ್ಲಿ ಇರುವುದೂ ಇಲ್ಲ. ನಮ್ಮ ತಪ್ಪುಗಳು ನಮಗೆ ಪಾಠವಾದರೆ ಸಾಕು

ಬೆಂಗಳೂರು: ಒಂದು ಬಿಂದಿಗೆಯನ್ನು ನಲ್ಲಿಯ ಕೆಳಗೆ ಇಟ್ಟಾಗ ಅದರಲ್ಲಿ ಮೊದಲು ಸುರಿಯುವ ನೀರು ಶಬ್ದ ಮಾಡುತ್ತದೆ. ಹಾಗೆ ತುಂಬುತ್ತಾ ಹೋದ ಹಾಗೆ ಅದರ ಶಬ್ದ ಕಡಿಮೆಯಾಗಿ ಆ ಸದ್ದು ಕೇಳಲು ಇಂಪಾಗಿರುತ್ತದೆ.

ಎಲ್ಲರ ಜೀವನವೂ ಹಾಗೇನೇ. ಮಕ್ಕಳಾಗಿದ್ದಾಗ ಎಲ್ಲವೂ ಆಟವೇ. ಸಿಡಿತ ಕುಣಿತ, ಸ್ವಲ್ಪ ದೊಡ್ಡವರಾಗುತ್ತಾ ಹೋದಂತೆ ತಂತಾನೆ ಗಂಭೀರ ಸ್ವಭಾವ ಬರುತ್ತಾ ಸಾಗುತ್ತದೆ. ಹಿಂದಿದ್ದ ಗಲಾಟೆ ಕಡಿಮೆಯಾಗಲೇಬೇಕು. ಹಿರಿತನ ಬಂದಂತೆ, ಮನ ಸಹಜವಾಗಿ ಹಳೇ ನೆನಪುಗಳನ್ನು ಮೆಲುಕು ಹಾಕುತ್ತಾ ಇರುತ್ತದೆ. ನಮ್ಮ ಜೀವನದಲ್ಲಿ ನಾವು ಮಾಡಿದ ತಪ್ಪುಗಳನ್ನು ಮತ್ತು ಅದರಿಂದ ಪಟ್ಟ ಕಷ್ಟಗಳನ್ನು ಅಂದರೆ ಅನುಭವಗಳನ್ನು ನೆನೆದು, ಆ ಪರಿಸ್ಥಿತಿ ಮಕ್ಕಳಿಗೆ ಬಾರದಂತೆ ಎಚ್ಚರ ವಹಿಸಲು ಮನಸ್ಸು ಹೇಳುತ್ತಿರುತ್ತದೆ. ಅದನ್ನೇ ಮಕ್ಕಳಿಗೆ ಹಾಗೂ ನಮಗಿಂತ ಕಿರಿಯರಿಗೆ ಹೇಳಿ ಆರ್ಥ ಮಾಡಿಸಿ, ಅವರು ಎಡವದಂತೆ ಮಾಡುವುದರಲ್ಲೆ ನಮ್ಮ ಜೀವನದ ಸಾರ್ಥಕತೆ ಅಡಗಿದೆಯೆಂಬುದು ಕೆಲವರ ಅಭಿಪ್ರಾಯವಾಗಿರುತ್ತದೆ.

ತಂದೆತಾಯಿಗಳು ಕಷ್ಟ ಸುಖಗಳನ್ನು ನೋಡಿ ತಮ್ಮ ಬದುಕನ್ನು ಸ್ವರ್ಗಮಾಡಿಕೊಂಡ ಮಕ್ಕಳು ತೀರಾ ಕಡಿಮೆ. ಪ್ರತೀ ವ್ಯಕ್ತಿಯ ಬದುಕು ವಿಭಿನ್ನ, ನಮಗಾದ ಅನುಭವಗಳೇ ಎಲ್ಲರಿಗೂ ಅಗುವುದಿಲ್ಲ, ಅಥವಾ ನಾವು ಮಾಡಿದ ತಪ್ಪುಗಳನ್ನೇ ಎಲ್ಲರೂ ಮಾಡುವುದೂ ಇಲ್ಲ. ಅವರವರ ಅನುಭವ ಅವರವರಿಗೆ. ಇದನ್ನೇ ನಮ್ಮ ಮಕ್ಕಳು ನಮಗೆ ನೇರವಾಗಿ ಹೇಳಲೂಬಹುದು. ಅದ್ದರಿಂದ, ಒಂದು ವಯಸ್ಸಿನವರೆಗೆ (ಮಕ್ಕಳು ಚಿಕ್ಕವರಿದ್ದಾಗ) ನಮ್ಮ ಅನುಭವಗಳನ್ನು ನೇರವಾಗಿ ಹೇಳದೇ, ಗಂಡ ಅಥವಾ ಹೆಂಡತಿ ಒಬ್ಬರಿಗೊಬ್ಬರು ಮಾತನಾಡುವಂತೆ ಅವರ ಅರಿವಿಗೆ ತರುವುದು ಒಳ್ಳೆಯ ಉಪಾಯ. ಇದು ಅವರಿಗೆ ಕಷ್ಟ ಸುಖಗಳನ್ನು ಅರಿವು ಮಾಡಿಸುವ ರೀತಿ. ಏಕೆಂದರೆ ಮಕ್ಕಳಿಗೆ ಸ್ವಂತ ಬುದ್ಧಿ ಬರುವವರೆಗೆ ತಂದೆತಾಯಿಗಳನ್ನು ಅನುಸರಿಸಿ ಬೆಳೆಯುತ್ತಿರುತ್ತಾರೆ. ಇದು ಎಲ್ಲಾ ಕಾಲಮಾನದಲ್ಲೂ ಸಹಜ ತಾನೆ. ನಮ್ಮ ಅಪ್ಪ-ಅಮ್ಮ ಮಾಡಿದ ತಪ್ಪುಗಳನ್ನು, ನಾವು ಮಾಡದಂತೆ ಎಚ್ವರ ವಹಿಸುತ್ತೇವೆ ಅಲ್ವಾ, ನಮ್ಮ ಮಕ್ಕಳೂ ಇದನ್ನೇ ಮಾಡುತ್ತಾರೆ.

ಇನ್ನೊಂದು ವಿಚಾರ, ಮಕ್ಕಳನ್ನು ನಾವಿರುವವರೆಗೂ ಕೈ ಹಿಡಿದು ನಡೆಸುವುದು ತರವಲ್ಲ , ಮೇಲಾಗಿ, ಅವರೂ ತಂದೆ ತಾಯಿಯರ ಮಾತಿನಂತೆ ನಡೆಯಲು ಬಯಸುವುದೂ ಇಲ್ಲ. ಬೆಳೆಯುತ್ತಾ ಹೋದಂತೆ ಅವರು ತಪ್ಪು ಮಾಡಿ, ಅವರೇ ಕಲಿಯುತ್ತಾರೆ. ಇದಕ್ಕೇ ಸ್ವಾನುಭವ ಎನ್ನುವುದು. ಇದು ಜೀವನ ಪೂರ್ತಿ ನಮ್ಮ ಜತೆಗಿರುತ್ತದೆ. ಇದು ಸರಿ ಎನಿಸುವುದಿಲ್ಲವೇ? ಉದಾಹರಣೆಗೆ ನಾನು ಕೈ ಸುಟ್ಟುಕೊಂಡಾಗ ಮಾತ್ರ ಅದರ ನೋವು ಅರ್ಥ ವಾಗುವುದು. ಮತ್ತೆ ಸುಡದಂತೆ ಎಚ್ಚರವಹಿಸುವುದು ಅಲ್ವಾ?.

ನಾನು ಈ ತಪ್ಪು ಮಾಡಿದೆ, ನೀನು ಇದರಿಂದ ಪಾಠ ಕಲಿ ಎನ್ನುವುದು, ಅವರು ನಾನೇನು ದಡ್ಡನಲ್ಲ, ಸಮಸ್ಯೆಯನ್ನು ನೀನು ಬಗೆಹರಿಸಿದ ರೀತಿ ಸರಿ ಇಲ್ಲ, ಹೀಗೆ ಮಾಡಿದ್ದರೆ ನಿನಗೆ ಈ ಕೆಟ್ಟ ಅನುಭವ ಆಗ್ತಿರಲಿಲ್ಲ. ನಾನಾಗಿದ್ದರೆ ಈ ರೀತಿ ಮಾಡುತ್ತಿದ್ದೆ.... ಅಥವಾ ನಿನಗೆ ಬಂದ ಸಮಸ್ಯೆ ನನಗೆ ಬರುವುದೇ ಇಲ್ಲ. ನಿನ್ನ ಕೆಲಸ ಮತ್ತು ನಿಭಾಯಿಸುವ ರೀತಿ, ಪರಿಸರ ಎಲ್ಲವೂ ಬೇರೆ. ನನ್ನ ಬದುಕೇ ವಿಭಿನ್ನ. ಯೋಚಿಸದಿರು ಅಪ್ಪ ಎಂದರೇನು ಮಾಡುವಿರಿ?. ಹಿಂದಿನಂತೆ, ತಪ್ಪೋ ಸರಿಯೋ, ಎದುರು ಮಾತನಾಡದೇ ಶಿರಸಾವಹಿಸಿ ಹಿರಿಯರ ಮಾತುಗಳನ್ನು ಆಲಿಸುತ್ತಿದ್ದ ಕಾಲ ಇದಲ್ಲ. ಎಲ್ಲವನ್ನೂ ಗೂಗಲ್ ಮಾಡಿ, ತನಗೆ ಸರಿ ಎನಿಸಿದರೆ ಮಾತ್ರ ನಂಬುವ ಪರ್ವ ಇದು.

ಹದಿನೈದರ ನಂತರದ ಮಕ್ಕಳು ತನ್ನದೇ ವ್ಯಕ್ತಿತ್ವ ಹೊಂದಲು ಇಷ್ಟಪಡುತ್ತಾರೆ ಎಂಬುದು ಇಂದಿನ ಪೀಳಿಗೆಯನ್ನು ನೋಡಿದಾಗ ಅನಿಸುವ ಅಂಶ. ಅಪ್ಪ ಅಮ್ಮ ಬೇಕೇಬೇಕು. ಅವರ ಬುದ್ದಿವಾದದ ಮಾತುಗಳು ಬೇಡವೇ ಬೇಡ ಎನ್ನುವ ಕಾಲ ಇದು.

ಹೀಗಿರುವಲ್ಲಿ, ತಂದೆ ತಾಯಿಯರು ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ. ಹೇಳಲೇಬಾರದು ಎಂದಲ್ಲ, ಅನುಭವದ ಮಾತುಗಳನ್ನ ಸಂದರ್ಭಾನುಸಾರವಾಗಿ ಹಂಚಿಕೊಳ್ಳಲೇಬೇಕು. ಆದರೆ ನಿರ್ಣಯ ಮಾಡುವುದನ್ನು ಅವರಿಗೇ ಬಿಡಬೇಕು ಮತ್ತು ಅವರ ನಿರ್ಣಯಗಳನ್ನು ಗೌರವಿಸಬೇಕು.

ನಮಗೆ ಅದು ಸರಿಯಿಲ್ಲ ಎನಿಸಿದರೆ, ಫಲಾಫಲಗಳ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ತಿಳಿಹೇಳಿದರೆ ತಪ್ಪಿಲ್ಲ. ಕೊನೆಯ ನಿರ್ಧಾರ ಅವರದ್ದಾದರೆ ಮನಸ್ತಾಪ, ಕಿರಿಕಿರಿ ಬರುವುದಿಲ್ಲ. ಒಳ್ಳೆಯದು ಕೆಟ್ಟದರ ನಡುವಿನ ವ್ಯತ್ಯಾಸದ ಅರಿವಾಗುವಂತೆ ಮಾಡಲೇಬೇಕು. ಇನ್ನು ಅವರೇ ನಮ್ಮ ಸಹಾಯ, ಅನಿಸಿಕೆ ಬಯಸಿದಾಗ ಹೇಳುವುದು, ಮಾಡುವುದು ಇದ್ದೇ ಇರುತ್ತದೆ. ಖುಷಿಯಿಂದ ಮಾಡೇ ಮಾಡುತ್ತೇವೆ.

ಹೇಳಿಕೊಟ್ಟ ಮಾತು...

ಹೇಳಿಕೊಟ್ಟ ಮಾತು ಮತ್ತು ಕಟ್ಟಿಕೊಟ್ಟ ಬುತ್ತಿ ಎರಡೂ ಜಾಸ್ತಿ ದಿನ ಬಾಳಿಕೆ ಬರುವುದಿಲ್ಲ. ಅನುಭವವೇ ದೊಡ್ಡ ಪಾಠ. ಇದು ನಮಗೂ ಗೊತ್ತಿರಬೇಕು. ನಮಗೆ ಮಕ್ಕಳ ಮೇಲೆ ನಂಬಿಕೆ ಬರುವ ತನಕ ಅವರನ್ನು ಗಮನಿಸುತ್ತಿರಬೇಕು ಅಷ್ಟೇ. ಅವರ ತಪ್ಪುಗಳು ಅವರ ಪ್ರಾಣ, ಮಾನಕ್ಕೆ ಹಾನಿಯಾಗುವಂತಿದ್ದರೆ ಮಾತ್ರ ತಿಳಿ ಹೇಳಿ ಸರಿಮಾಡುವುದು ತಂದೆ ತಾಯಿಯರ ಆದ್ಯ ಕರ್ತವ್ಯ. ಸಣ್ಣ ಪುಟ್ಟ ತಪ್ಪುಗಳನ್ನು ನೋಡಿಯೂ ನೋಡದಂತೆ ಇರುವುದು ಜಾಣತನ. ಅವುಗಳನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದನ್ನ ಗಮನಿಸುತ್ತಿರಬೇಕು. ಅವರ ನಡವಳಿಕೆ ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದಾಗ, ನಮಗೂ ನಮ್ಮ ಮಕ್ಕಳ ಮೇಲೆ ನಂಬಿಕೆ ಬರುತ್ತದೆ. ಜೀವನ ಕಟ್ಟಿಕೊಳ್ಳುತ್ತಾರೆ ಎಂದೆನಿಸಿದಾಗ ನಮ್ಮ ಮನಸ್ಸು ನಿರಾಳವಾಗುತ್ತದೆ ಅಲ್ಲವೆ?

ಎಲ್ಲವೂ ಬೇರೆ ಬೇರೆ...

ಲೋಕೋ ಭಿನ್ನ ರುಚಿಃ ನಾವು ಮಾಡಿದ್ದು ಎಲ್ಲರಿಗೂ ಸರಿಯಾಗುತ್ತದೆ ಎಂದು ತಿಳಿಯುವುದು ತಪ್ಪು. ಅವರವರ ಕೆಲಸ, ಸಾಮರ್ಥ್ಯ, ಕಾಲ ಮತ್ತು ಸಂದರ್ಭ ಬೇರೆ ಬೇರೆಯೇ ಇರುವುದು. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅಪ್ಪ ಬೇರೆ, ಮಕ್ಕಳು ಬೇರೆ. ಒಟ್ಟಾರೆ ವ್ಯಕ್ತಿತ್ವಗಳೂ, ಮನಸ್ಥಿತಿಗಳೂ ಬೇರೇನೇ ಅಲ್ವಾ...

ನಾಗಲಕ್ಷ್ಮಿ ಪ್ರಸನ್ನಕುಮಾರ್