ನ್ಯೂಸ್

15 ರಾಣಿಯರು, 39 ಮಕ್ಕಳು, 100 ಸೇವಕಿಯರೊಂದಿಗೆ ಅಬುದಾಬಿಗೆ ಆಗಮಿಸಿದ ಆಫ್ರಿಕನ್ ರಾಜ; ವಿಡಿಯೋ ನೋಡಿ| African King

African King: ದಕ್ಷಿಣ ಆಫ್ರಿಕಾದ ಎಸ್ವಾಟಿನಿಯದ ರಾಜ ಎಂಸ್ವಾತಿ III, 15 ರಾಣಿಯರು, 39 ಮಕ್ಕಳು, 100 ಸೇವಕಿಯರೊಂದಿಗೆ ಐಷಾರಾಮಿ ಜೆಟ್​ನಲ್ಲಿ ಅಬುಧಾಬಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಡಿಯೋ ಬಹಿರಂಗಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸೋಮವಾರ(ಅ. 06) ವೈರಲ್ ಆಗಿದೆ.

2025  ಜುಲೈ 10ರಂದು ಅಬುಧಾಬಿಗೆ ಆಗಮಿಸಿದ ವಿಡಿಯೋ ಎನ್ನಲಾಗಿದೆ. ಸಾಂಪ್ರದಾಯಿಕ ಚಿರತೆ-ಮುದ್ರಿತ ಉಡುಪನ್ನು ತೊಟ್ಟು ಆಗಮಿಸಿರುವ ರಾಜ ಎಂಸ್ವತಿ III, ಆತನ ಹಿಂದೆ 15 ಮಂದಿ ರಾಣಿಯರು, 39 ಮಕ್ಕಳು, 100 ಜನ ಸೇವಕರು ವಿಮಾನದಿಂದ ಇಳಿದು ಬರುತ್ತಿದ್ದು, ಅಬುಧಾಬಿ ಅಧಿಕಾರಿಗಳು ಅವರನ್ನು ಸ್ವಾಗತಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಜೊತೆ ಇದನ್ನು ನಿಭಾಯಿಸಲು ಏರ್​ಪೋರ್ಟ್​ ಸಿಬ್ಬಂದಿ ಕೆಲಕಾಲ ನಿಲ್ದಾಣದ ಮೂರು ಟರ್ಮಿನಲ್​ಗಳನ್ನು ಮುಚ್ಚಿದ್ದರು ಎಂದು ವರದಿಯಾಗಿದೆ.

ರಾಜ ಎಂಸ್ವತಿ III ಯಾರು?

ರಾಜ ಎಂಸ್ವತಿ III ದಕ್ಷಿಣ ಆಫ್ರಿಕಾದ ಎಸ್ವಾಟಿನಿ (ಹಿಂದೆ ಸ್ವಾಜಿಲ್ಯಾಂಡ್) ದ ಆಡಳಿತಗಾರ ಮತ್ತು ಆಫ್ರಿಕಾ ಖಂಡದ ಕೊನೆಯ ರಾಜ. ಅವರ ತಂದೆ ರಾಜ ಸೋಬುಜಾ II, ತಮ್ಮ ಅಗಾಧ ರಾಜಮನೆತನಕ್ಕೆ ಹೆಸರುವಾಸಿಯಾಗಿದ್ದರು. ಅವರಿಗೂ 70 ಕ್ಕೂ ಹೆಚ್ಚು ಹೆಂಡತಿಯರು, 210 ಮಕ್ಕಳು ಮತ್ತು ಸುಮಾರು 1,000 ಮೊಮ್ಮಕ್ಕಳಿದ್ದರು ಎಂದು ವರದಿಗಳಿವೆ.

1986ರಲ್ಲಿ ಸಿಂಹಾಸನವನ್ನೇರಿದ ರಾಜ ಎಂಸ್ವತಿ III, 30 ಕ್ಕೂ ಹೆಚ್ಚು ಹೆಂಡತಿಯರು ಮತ್ತು 35 ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆಂದು ಎನ್ನಲಾಗಿದೆ. ಅಂದಾಜು $1 ಬಿಲಿಯನ್‌ಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಹೊಂದಿದ್ದು,  ವಿಶ್ವದ ಅತ್ಯಂತ ಶ್ರೀಮಂತ ರಾಜರಲ್ಲಿ ಒಬ್ಬರಾಗಿದ್ದಾರೆ.

ರಾಜ ಎಂಸ್ವಾತಿಯ ಐಷಾರಾಮಿ ಜೀವನ ಶೈಲಿ ಬಗ್ಗೆ ಟೀಕೆ

ರಾಜ ಎಂಸ್ವಾತಿ ಪ್ರತಿ ವರ್ಷ ಸಾಂಪ್ರದಾಯಿಕ ರೀಡ್ ಡ್ಯಾನ್ಸ್ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಈ ವೇಳೆ ಅವರು ಹೊಸ ವಧುವನ್ನು ಆಯ್ಕೆ ಮಾಡುತ್ತಾರೆ ಎನ್ನಲಾಗಿದೆ. ಅಬುಧಾಬಿ ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ರಾಜನ ಐಷಾರಾಮಿ ಜೀವನದ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಅನೇಕರು ರಾಜನ ಪರಿವಾರವು ಇಡೀ ಹಳ್ಳಿಯಂತೆ ಕಾಣುತ್ತದೆ ಎಂದು ತಮಾಷೆ ಮಾಡಿದರು. ಹಾಗೆಯೇ ಕೆಲವರು ಎಸ್ವಾಟಿನಿ ದೇಶದ ಜನಸಂಖ್ಯೆಯ ಸುಮಾರು ಶೇ. 60ರಷ್ಟು ಜನರ ಬಡತನ ರೇಖೆಯನ್ನು ಉಲ್ಲೇಖಿಸಿ ರಾಜನ ಐಷರಾಮಿತನವನ್ನು ಟೀಕಿಸಿದ್ದಾರೆ. (ಏಜೆನ್ಸೀಸ್)