ಶಿಕಾರಿಪುರದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಯಶವಂತಕುಮಾರ್ ಉದ್ಘಾಟಿಸಿದರು. ಸಂತೋಷ್‌ಕುಮಾರ್, ನಾಗರಾಜ ನಾಯ್ಕ, ಕೆ.ಎಚ್.ಪುಟ್ಟಪ್ಪ, ಗೀತಾ, ಶ್ರೀನಿವಾಸ್ ಇತರರಿದ್ದರು. 
ನ್ಯೂಸ್

ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಿ

ಸೋಮಶೇಖರ ಎನ್

ಶಿಕಾರಿಪುರ: ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು. ಮಾನವೀಯತೆ, ಸಾಮಾಜಿಕ ಕಳಕಳಿ ನಮ್ಮಲ್ಲಿ ಸದಾ ಇರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಯಶವಂತಕುಮಾರ್ ಹೇಳಿದರು.

ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಣ ಇಲಾಖೆ, ತಾಲೂಕು ಕಾನೂನು ಸೇವಾ ಪ್ರಾಧಿಕಾರ, ತಾಪಂ ಆಶ್ರಯದಲ್ಲಿ ಆಯೋಜಿಸಿದ್ದ ಪೋಕ್ಸೋ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜ ಸದೃಢವಾಗಿ ರೂಪುಗೊಳ್ಳಲು ನಾವೆಲ್ಲರೂ ಕಾರಣ. ಸದ್ವಿಚಾರ, ಸಹಬಾಳ್ವೆ ಇರಬೇಕು. ಭೇದ ತೊಡೆದು ಹಾಕಬೇಕು. ಸಮಾಜ ನಮ್ಮದು ಎಂಬ ಕಲ್ಪನೆ ಮೊದಲು ನಮ್ಮದಾಗಬೇಕು. ಸಮಾಜದಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳಿಗೆ ಪೂರಕ ವಾತಾವರಣ ಕಲ್ಪಿಸಬಾರದು. ಲೈಂಗಿಕ ದೌರ್ಜನ್ಯದಂತ ಕೃತ್ಯಗಳನ್ನು ತಡೆಗಟ್ಟಬೇಕು ಎಂದು ತಿಳಿಸಿದರು.

ಉಪನ್ಯಾಸಕ ಕೆ.ಎಚ್.ಪುಟ್ಟಪ್ಪ ಪೋಕ್ಸೋ ಕಾಯ್ದೆ ಕುರಿತು ಮಾತನಾಡಿ, 18 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಅಪರಾಧ ಸಾಬೀತಾದರೆ ಕಠಿಣ ಶಿಕ್ಷೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುವ ಮೂಲಕ ಹೊರಗಿನ ಆಕರ್ಷಣೆಗಳಿಗೆ ಒಳಗಾಗುತ್ತಿದ್ದಾರೆ. ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದರು.

ಬಿಇಒ ಕೆ.ಬಿ.ಲೋಕೇಶಪ್ಪ, ವಕೀಲರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್, ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಉಪಾಧ್ಯಕ್ಷ ನಾಗರಾಜ್ ನಾಯ್ಕ, ಗೀತಾ, ಶ್ರೀನಿವಾಸ್, ಕಾಂತರಾಜು, ಗದಿಗೇಶ್, ಸಂಕೇತ್, ಸಚಿನ್ ಇತರರಿದ್ದರು.