ನ್ಯೂಸ್

ಹನುಮ ಜಯಂತಿ ಕುರಿತು ಅಪಹಾಸ್ಯ; ವೈರಲ್​ ಆಗುತ್ತಿದೆ ಆದಿಪುರುಷ್​ ನಿರ್ದೇಶಕನ ಹಳೆಯ ಟ್ವೀಟ್​

ಮುಂಬೈ: ಪ್ರಭಾಸ್​, ಸೈಫ್​ ಅಲಿ ಖಾನ್, ಕೃತಿ ಸನೊನ್​ ಅಭಿನಯದ ಬಹು ನಿರೀಕ್ಷಿತ ಪ್ಯಾನ್​ ಇಂಡಿಯಾ ಚಿತ್ರ ಆದಿಪುರುಷ್​ ಶುಕ್ರವಾರ(ಜೂನ್​ 16) ರಂದು ವಿಶ್ವದಾದ್ಯಂತ ತೆರೆ ಕಂಡಿದೆ.

ಬಿಡುಗಡೆಗೂ ಮುನ್ನ ತೀವ್ರ ಕುತೂಹಲ ಮೂಡಿಸಿದ್ದ ಆದಿಪುರುಷ್ ಚಿತ್ರವು ಕಳಪೆ VFX ಸೇರಿದಂತೆ ಅನೇಕ ವಿಚಾರಗಳಿಗೆ ಹೆಚ್ಚು ಸದ್ದು ಮಾಡಿತ್ತು. ಈ ಸಿನಿಮಾ ಜಾಗತಿಕವಾಗಿ 7,000ಕ್ಕೂ ಅಧಿಕ ಥಿಯೇಟರ್​ಗಳಲ್ಲಿ ಬಿಡುಗಡೆ ಜೂನ್​ 16ರಂದು ಬಿಡುಗಡೆಯಾಗಿದ್ದು, 150 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ.

ವಿವಾದಗಳಿಂದಲ್ಲೇ ಹೆಚ್ಚು ಸದ್ದು

ಬಿಡುಗಡೆಗೂ ಮುನ್ನ ಹಾಗೂ ಅಭಿಮಾನಿಗಳ ಹುಚ್ಚಾಟದಿಂದಲ್ಲೇ ಸಾಕಷ್ಟು ಸದ್ದು ಮಾಡುತ್ತಿದ್ದು, ನಿಮಾದ ಕುರಿತು ಕೆಟ್ಟದ್ದಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿ ಒಬ್ಬರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಇದಾದ ಬಳಿಕ ಅಭಿಮಾನಿಯೋರ್ವ ಬಿಯರ್​ ಬಾಟಲ್​ನಿಂದ ಕೈ ಕೊಯ್ದುಕೊಂಡು ಪ್ರಭಾಸ್​ಗೆ ಜೈಕಾರ ಹಾಕಿ ಅತಿರೇಕದ ವರ್ತನೆ ತೋರಿರುವ ವಿಡಿಯೋಗಳು ವೈರಲ್​ ಆಗಿವೆ.

ಇನ್ನು ಹೊಸ ವಿವಾದ ಒಂದರಲ್ಲಿ ಚಿತ್ರದ ನಿರ್ದೇಶಕ ಓಂ ರಾವತ್ ಚಿತ್ರ ಪ್ರದರ್ಶನಗೊಳ್ಳುವ ಪ್ರತಿಯೊಂದು ಥಿಯೇಟರ್​ನಲ್ಲಿ ಆಂಜನೇಯನಿಗೆ ಒಂದು ಸೀಟ್​ ಮೀಸಲಿಡುವಂತೆ ತಿರುಪತಿಯಲ್ಲಿ ನಡೆದ ಪ್ರೀ ರಿಲೀಸ್​ ಇವೆಂಟ್​ನಲ್ಲಿ ವಿನಂತಿಸಿದ್ದರು. ಇದಕ್ಕೆ ಪೂರಕ ಎಂಬಂತೆ ಚಿತ್ರಮಂದಿರದ ಮಾಲೀಕರು ಸಹ ನಿರ್ದೇಶಕರ ಮನವಿಗೆ ಸ್ಪಂದಿಸಿದ್ದರು.

ವಿವಾದಕ್ಕೆ ಎಡೆ ಮಾಡಿಕೊಟ್ಟ ಹಳೆಯ ಟ್ವೀಟ್​

​ನಿರ್ದೇಶಕ ಓಂ ರಾವತ್​ ಮನವಿ ಬೆನ್ನಲ್ಲೇ ಈ ಹಿಂದೆ ಅವರು ಹನುಮನ ಕುರಿತು 2015ರಲ್ಲಿ ಮಾಡಿದ್ದ ಹಳೆಯ ಟ್ವೀಟ್​ ಒಂದು ಮುನ್ನೆಲೆಗೆ ಬಂದಿದ್ದು, ಕೆಲವರು ಈ ವಿಚಾರವಾಗಿ ಕಿಡಿಕಾರಿದರೆ ಇನ್ನು ಕೆಲವರು ಚಿತ್ರವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ಧಾರೆ.

ಏಪ್ರಿಲ್​ 04, 2015ರಂದು ಹನುಮ ಏನಾದರೂ ಕಿವುಡನಾಗಿದ್ದಾನೆಯೆ. ನನ್ನ ನೆರೆಹೊರೆಯಲ್ಲಿ ವಾಸಿಸುತ್ತಿರುವ ಜನರು ಹಾಗೆಂದುಕೊಂಡಿದ್ದಾರೆ. ಹನುಮ ಜಯಂತಿಯ ಹೆಸರಿನಲ್ಲಿ ಜೋರಾಗಿ ಹಾಡುಗಳನ್ನು ಹಾಕಿದ್ದಾರೆ ಎಂದು ಟ್ವೀಟ್​ ಮಾಡಿ ವಿವಾದವನ್ನು ಹುಟ್ಟುಹಾಕಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ನಿರ್ದೇಶಕ ಓಂ ರಾವತ್​ ಡಿಲೀಟ್​ ಮಾಡಿರುವ ಟ್ವೀಟ್​ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಇದನ್ನು ಸಿನಿರಸಿಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.