ನ್ಯೂಸ್

ದಶಪಥ ಹೆದ್ದಾರಿಯಲ್ಲಿದೆ ಎಂಟ್ರಿ-ಎಕ್ಸಿಟ್ ಸಮಸ್ಯೆ: ಎಡಿಜಿಪಿ ಅಲೋಕ್ ಕುಮಾರ್

ರಾಮನಗರ: ಕಳೆದ ಐದಾರು ತಿಂಗಳಿನಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ 58ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 48ಕ್ಕೂ ಹೆಚ್ಚು ಅಪಘಾತಗಳಾಗಿವೆ. ಮಂಡ್ಯ ವ್ಯಾಪ್ತಿಯಲ್ಲಿಯೇ 4 ತಿಂಗಳಿಂದ 120ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಕುರಿತು ಎಲ್ಲೆಲ್ಲಿ ಅಪಘಾತ ನಡೆದಿದೆ‌. ಆ ಸ್ಥಳಗಳ ಸಮಸ್ಯೆ ಬಗ್ಗೆ ಪರಿಶೀಲಿಸಿದ್ದೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.

ದಶಪಥ ಹೆದ್ದಾರಿ ವೀಕ್ಷಿಸಿದ ಅಲೋಕ್ ಕುಮಾರ್, ಅಪಘಾತಗಳ ಕುರಿತು ಮಾತನಾಡುತ್ತಾ ಹೆದ್ದಾರಿಯಲ್ಲಿ ಎಂಟ್ರಿ-ಎಕ್ಸಿಟ್ ಸಮಸ್ಯೆಯಿದೆ. ಕೆಲವೆಡೆ ರಸ್ತೆಗಳು ಅಂಕುಡೊಂಕಾಗಿವೆ. ಇದರಿಂದ ವಾಹನಗಳು ಡಿವೈಡರ್​ನಿಂದ ಹಾರುತ್ತಿವೆ. ಹೈವೆಯಲ್ಲಿ ಲೇನ್ ಡಿಸಿಪ್ಲಿನ್ ಬಳಸಬೇಕು. ಈ ಹಿನ್ನೆಲೆಯಲ್ಲಿ ಹೈ ಸ್ಪಿಡ್ ಲಿಮಿಟ್ ತಡೆಗೆ ಸ್ಪೀಡ್ ರೆಡಾರ್ ಅಳವಡಿಕೆ ಮಾಡುತ್ತೇವೆ ಎಂದರು.

ಹೆದ್ದಾರಿ ಪ್ರಾಧಿಕಾರಕ್ಕೆ ಸಲಹೆ, ಸೂಚನೆ: ವಾಹನ ಚಲಾಯಿಸುವ ವೇಳೆ ಮೊಬೈಲ್ ಬಳಕೆ ಮಾಡಿದರೆ, ಡ್ರಂಕ್ ಅಂಡ್ ಡ್ರೈವ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಿತಿ ಮೀರಿ ವಾಹನ ಚಾಲನೆ ಮಾಡಿದರೆ ಕೇಸ್ ಹಾಕುತ್ತೇವೆ. ಕನಿಷ್ಠ ಶೇ.25 ರಷ್ಟು ಅಪಘಾತ ಕಡಿಮೆ ಮಾಡುವ ಗುರಿ ಹೊಂದಿದ್ದೇವೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ಸಲಹೆ, ಸೂಚನೆ ನೀಡಿದ್ದೇವೆ ಎಂದರು.

ತಿರುವುಗಳಲ್ಲಿ 60- 80 ವೇಗ ಮಿತಿ ಬಳಕೆ: ನಮ್ಮ ಕುಟುಂಬಕ್ಕೆ ನಾವುಗಳೇ ಮುಖ್ಯ. ಆದ್ದರಿಂದ ಸುಗಮ ಸಂಚಾರಕ್ಕೆ ಸೀಲ್ಟ್ ಬೆಲ್ಟ್ ಧರಿಸಿ, ಇಂಡಿಕೇಟರ್ ಬಳಕೆ ಮಾಡಿ, ಸ್ಪೀಡ್ ಲಿಮಿಟ್​ನಲ್ಲಿಯೇ ವಾಹನ ಚಲಾಯಿಸಿ. ದಶಪಥ ಹೆದ್ದಾರಿಯಲ್ಲಿ ಗರಿಷ್ಟ ಮಿತಿ 100 ಕಿ.ಮೀ ಇದೆ. ತಿರುವುಗಳಲ್ಲಿ 60- 80 ವೇಗ ಮಿತಿ ಬಳಕೆ ಮಾಡಬೇಕು ಎಂದು ವಾಹನ ಸವಾರರಿಗೆ ಎಡಿಜಿಪಿ ಅಲೋಕ್ ಕುಮಾರ್ ಸಲಹೆ ನೀಡಿದರು.

ಒತ್ತಡ ಹೇರುತ್ತೇವೆ: ಎನ್.ಎಚ್.ಅಧಿಕಾರಿಗಳ ನ್ಯೂನ್ಯತೆ ವಿಚಾರ ಕುರಿತು ಮಾತನಾಡಿದ ಅಲೋಕ್ ಕುಮಾರ್ ಅವರು 'ನಮ್ಮ ಸೂಚನೆಗಳನ್ನು ಹೈವೆ ಪ್ರಾಧಿಕಾರ ಪಾಲಿಸದಿದ್ದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಅಷ್ಟೇ ಅಲ್ಲ, ನಾವು ನೀಡಿರುವ ಕಾಲವಕಾಶ ಮೀರಿದರೂ ಖಂಡಿತ ಕ್ರಮ ಕೈಗೊಳ್ಳಲಾಗುವುದು. ಪ್ರಾಧಿಕಾರ ಆಂಬುಲೆನ್ಸ್‌, ಹೈವೆ ಪೆಟ್ರೋಲಿಯಂ ವ್ಯವಸ್ಥೆ ಮಾಡಬೇಕು, ಅಲ್ಲಲ್ಲಿ ತುರ್ತು ಗೇಟ್​ಗಳನ್ನು ಸಿದ್ಧಪಡಿಸಬೇಕು. ಹಲವೆಡೆ ಸ್ಕೈವಾಕ್ ನಿರ್ಮಾಣ ಮಾಡಬೇಕು. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ಒತ್ತಡವನ್ನು ಹೇರುತ್ತೇವೆಂದು' ಅಲೋಕ್ ಕುಮಾರ್ ಆಶ್ವಾಸನೆ ನೀಡಿದರು.