ನ್ಯೂಸ್

ಮತ್ತೊಂದು ಮಾಧ್ಯಮ ಸಂಸ್ಥೆ ತೆಕ್ಕೆಗೆ ತೆಗೆದುಕೊಂಡ ಅದಾನಿ ಸಮೂಹ

ಮುಂಬೈ: ಕುಬೇರ ಉದ್ಯಮಿ ಗೌತಮ್ ಅದಾನಿ ಅವರ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಮಾಧ್ಯಮ ಕ್ಷೇತ್ರದಲ್ಲಿ ತನ್ನ ಉಪಸ್ಥಿತಿಯನ್ನು ವಿಸ್ತರಿಸಲು ಮತ್ತೊಂದು ಮಹತ್ವದ ಹೆಜ್ಜೆ ಹಾಕಿದೆ. ಸುದ್ದಿ ಸಂಸ್ಥೆಯಾದ ಇಂಡೋ-ಏಷ್ಯನ್ ನ್ಯೂಸ್ ಸರ್ವಿಸ್ (ಐಎಎನ್‌ಎಸ್‌)ನಲ್ಲಿ ಹೆಚ್ಚಿನ ಪಾಲು ಪಡೆದುಕೊಂಡಿದೆ.

ಐಎಎನ್ಎಸ್​ನಲ್ಲಿ ಅದಾನಿ ಎಂಟರ್‌ಪ್ರೈಸಸ್ ಶೇಕಡಾ 50.5% ಪಾಲನ್ನು ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ, ಐಎಎನ್ಎಸ್​ನ ಸಂಪೂರ್ಣ ಕಾರ್ಯಾಚರಣೆ ಮತ್ತು ನಿರ್ವಹಣೆಯ ನಿಯಂತ್ರಣ ತನ್ನ ವ್ಯಾಪ್ತಿಗೆ ಬರುತ್ತದೆ ಎಂದು ಅದಾನಿ ಸಮೂಹವು ಪ್ರಕಟಣೆಯಲ್ಲಿ ತಿಳಿಸಿದೆ.

2022-23 ಹಣಕಾಸು ವರ್ಷದಲ್ಲಿ 11.86 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಆದಾಯವನ್ನು ಈ ಸುದ್ದಿ ಸಂಸ್ಥೆ ಪಡೆದುಕೊಂಡಿದೆ ಎಂದು ವರದಿಯಾಗಿದೆ.

ಅದಾನಿ ಸಮೂಹವು ಕಳೆದ ವರ್ಷ ಮಾರ್ಚ್‌ನಲ್ಲಿ ಕ್ವಿಂಟಿಲಿಯನ್ ಬಿಸಿನೆಸ್ ಮೀಡಿಯಾವನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಮಾಧ್ಯಮ ಉದ್ಯಮವನ್ನು ಪ್ರವೇಶಿಸಿತ್ತು, ಇದು ವ್ಯಾಪಾರ ಮತ್ತು ಹಣಕಾಸು ಸುದ್ದಿ ಡಿಜಿಟಲ್ ಮಾಧ್ಯಮ ವೇದಿಕೆ BQ ಪ್ರೈಮ್ ನಿರ್ವಹಿಸುತ್ತದೆ. ನಂತರ ಡಿಸೆಂಬರ್ 2022ರಲ್ಲಿ NDTV ಯಲ್ಲಿ ಶೇಕಡಾ 65ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿತ್ತು.