ನ್ಯೂಸ್

ನಟಿಸಿದ ಮೊದಲ ಚಿತ್ರವೇ ಫ್ಲಾಪ್! ಆ ಒಂದು ಪಾತ್ರದಿಂದ ರಾತ್ರೋ ರಾತ್ರಿ ಸ್ಟಾರ್ ಆದ ನಟಿ ಈಕೆ

ಮುಂಬೈ: ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕು ಎಂಬುದು ಅದೆಷ್ಟೋ ಜನರ ಕನಸು ಎಂದರೆ ತಪ್ಪಾಗಲಾರದು. ಒಮ್ಮೊಮ್ಮೆ ತಾವು ಮಾಡುತ್ತಿರುವ ವೃತ್ತಿ ಬೇರೆಯಾದರು ಅದನ್ನು ಬಿಟ್ಟು ನಟನಾ ವೃತ್ತಿಗೆ ಇಳಿಯಬೇಕು ಎಂಬ ಯೋಚನೆ ಮೂಡಿರುವುದು ಉಂಟು. ಅದಕ್ಕೆ ಇಂದು ಅನೇಕ ನಿದರ್ಶನಗಳು ಕೂಡ ಇವೆ. ಸಿನಿರಂಗದ ಹಿನ್ನೆಲೆ ಇರದೆ, ಗಾಡ್​ಫಾದರ್ ಇಲ್ಲದೆಯೇ ಚಿತ್ರ ಮಾಡಬೇಕು ಎಂಬ ಆಸೆಯನ್ನು ಹೊತ್ತುಬರುವವರು ಒಂದು ರೀತಿಯಾದರೆ, ತಮ್ಮ ಪೋಷಕರು ಸಿನಿಮಾದವರೇ ಆದರೂ ಅವಕಾಶ ಸಿಗದೆ ಇರುವುದು ಮತ್ತೊಂದು ರೀತಿ. ಈ ಅನುಭವವನ್ನು ತನ್ನ ಚೊಚ್ಚಲ ಫಿಲಂನಲ್ಲಿ ನೋಡಿದ ನಟಿ ಮುಂದೆ ಮಾಡಿದ್ದೇನು? ಆಕೆ ಸತತವಾಗಿ ಸೋತ ಬಳಿಕ ಗೆದ್ದರೇ? ಈ ಎಲ್ಲ ಪ್ರಶ್ನೆಗಳಿಗೂ ಅವರ ಯಶಸ್ಸು ಕೊಟ್ಟ ಉತ್ತರವಿದು.

ಸಣ್ಣ ಬಜೆಟ್‌ ಸಿನಿಮಾ

2010ರಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಬಾಲಿವುಡ್‌ನ ಅತ್ಯಂತ ಮೋಹಕ ನಟಿಯಿವರು. ಚಲನಚಿತ್ರ ಜಗತ್ತಿಗೆ ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿಯೂ ಮೊದಲ ಪ್ರಯಾಣದಲ್ಲಿ ಯಶಸ್ವಿಯಾಗುವುದಿಲ್ಲ. ಆ ಸಾಲಿಗೆ ಈ ನಟಿ ಕೂಡ ಸಾಕ್ಷಿ. ಸೂಪರ್‌ಸ್ಟಾರ್‌ಗಳ ಕುಟುಂಬದಿಂದ ಬಂದಿದ್ದರೂ, ಒಳ್ಳೆಯ ರೂಪವಂತೆ ಆದರೂ, ಪ್ರತಿಭೆಯಿದ್ದರೂ ಈ ನಟಿಯ ಚೊಚ್ಚಲ ಸಿನಿಮಾ ರಿಲೀಸ್ ಆದ ಕೆಲವೇ ದಿನಗಳಲ್ಲಿ ಫ್ಲಾಪ್. ಈ ನಟಿಯ ತಂದೆ ಬಾಲಿವುಡ್​ನಲ್ಲಿ ಹೆಸರಾಂತ ವಿಲನ್ ಆಗಿದ್ದರೂ ಸಹ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 3 ವರ್ಷಗಳಾದರೂ ಮನ್ನಣೆ ಸಿಗಲಿಲ್ಲ. ಮೊದಲ ಫಿಲಂ ಸೋತರು ಕುಗ್ಗದ ನಟಿ ಅವಕಾಶಕ್ಕಾಗಿ ಕಾದು 2013ರಲ್ಲಿ ಬಿಡುಗಡೆಗೊಂಡ ಒಂದೇ ಒಂದು ಸಿನಿಮಾದಿಂದ ರಾತ್ರೋರಾತ್ರಿ ಸ್ಟಾರ್ ಆಗಿ ಹೊರಹೊಮ್ಮಿದರು. ಸಣ್ಣ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಬ್ಲಾಕ್‌ಬಸ್ಟರ್ ಚಲನಚಿತ್ರವು ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಯಿತು. ಇತಿಹಾಸ ನಿರ್ಮಿಸಿದ ಈ ಚಿತ್ರದಲ್ಲಿ ಕಾಣಿಸಿಕೊಂಡಿರುವ ಹೀರೋಯಿನ್ ಇದೀಗ ಜನರ ನೆಚ್ಚಿನ ಸ್ಟಾರ್​.

ಆಶಿಕಿ 2

2013ರಲ್ಲಿ ಬಿಡುಗಡೆಗೊಂಡ ‘ಆಶಿಕಿ 2’ ಚಿತ್ರದಲ್ಲಿ ಆರೋಹಿ ಪಾತ್ರವನ್ನು ನಿರ್ವಹಿಸಿದ ಶ್ರದ್ಧಾ ಕಪೂರ್ ತಮ್ಮ ಪಾತ್ರದ ಮೂಲಕ ಸಿನಿಪ್ರೇಕ್ಷಕರ ಮನಸೂರೆಗೊಳಿಸಿದ್ದಲ್ಲದೇ, ಅವರ ಅಭಿಮಾನಿ ಆಗುವಂತೆ ಮೋಡಿ ಮಾಡಿದರು. ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಿಟ್ಟಿಸಿಕೊಂಡ ನಟಿ, ಮುಂದೆ ಮಾಡಿದ ಚಿತ್ರಗಳು ಬ್ಲಾಕ್​ಬಸ್ಟರ್​ ಹಿಟ್​. ಬಾಲಿವುಡ್​ನ ಹೆಸರಾಂತ ಖಳನಾಯಕ ಶಕ್ತಿ ಕಪೂರ್ ಅವರ ಪುತ್ರಿ ಶ್ರದ್ಧಾ ಕಪೂರ್ ಎಂಬುದು ಇಂದಿಗೂ ಅನೇಕರಿಗೆ ತಿಳಿದಿರದ ಸಂಗತಿ.

ಸತತ ಕಾಯುವಿಕೆಯ ಬಳಿಕ ‘ಆಶಿಕಿ 2’ ಎಂಬ ಒಂದೇ ಒಂದು ಸಿನಿಮಾ ಶ್ರದ್ಧಾ ಕಪೂರ್ ಅವರ ಇಡೀ ಭವಿಷ್ಯವನ್ನು ರಾತ್ರೋ ರಾತ್ರಿ ಬದಲಾಯಿಸಿತು. 2010ರಲ್ಲಿ ರಿಲೀಸ್ ಆದ ‘ತೀನ್ ಪಟ್ಟಿ’ ಚಿತ್ರದಲ್ಲಿ ಸೋತು ಇಂದು ಸ್ಟಾರ್​ ಆಗಿ ಮಿಂಚುತ್ತಿರುವ ಶ್ರದ್ಧಾ ಇದೀಗ ಯಶಸ್ವಿ ನಟಿಯರ ಪೈಕಿ ಒಬ್ಬರು. ಹಲವು ಸ್ಟಾರ್​ ನಟರ ಸಿನಿಮಾಗಳಿಗೆ ನಾಯಕಿಯಾಗಿರುವ ಇವರು, ಸದ್ಯ ಹೊಸ ಪ್ರಾಜೆಕ್ಟ್​ಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ,(ಏಜೆನ್ಸೀಸ್).