ತಮಿಳುನಾಡು: ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಚಿತ್ರಪ್ರೇಮಿಗಳಿಂದ ಸೈ ಎನಿಸಿಕೊಂಡ ನಟಿ ವರಲಕ್ಷ್ಮಿ ಶರತ್‌ಕುಮಾರ್, ಆಯಾ ಭಾಷೆಗಳ ಚಿತ್ರಗಳಲ್ಲಿ ಹಲವಾರು ಪಾತ್ರಗಳ ಮೂಲಕ ಸಿನಿರಸಿಕರಿಗೆ ತಮ್ಮದೇ ವಿಶೇಷ ಛಾಪು ಮೂಡಿಸಿರುವ ನಟಿ ಇದೀಗ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದು, ಈ ವಿಷಯ ಅವರ ಅಭಿಮಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದೆ.
ಕಳೆದ ನಾಲ್ಕು ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿರುವ ವರಲಕ್ಷ್ಮಿ ಇತ್ತೀಚೆಗಷ್ಟೇ ಬಿಡುಗಡೆಯಾದ ಪ್ಯಾನ್ ಇಂಡಿಯಾ ಸಿನಿಮಾ 'ಹನು-ಮ್ಯಾನ್'ನಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದರು. ಆದರೆ, ಇದೀಗ ನಟಿ ದಿಢೀರ್ ಎಂಬಂತೆ ಮುಂಬೈ ಮೂಲದ ಆರ್ಟ್ ಗ್ಯಾಲರಿಸ್ಟ್ ಆದ ನಿಕೋಲಾಯ್ ಸಚ್‌ದೇವ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ನಿಶ್ಚಿತಾರ್ಥವು ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರ ನಡುವೆ ನೆರವೇರಿದೆ. ವರಲಕ್ಷ್ಮಿ ಶರತ್‌ಕುಮಾರ್ ಮತ್ತು ನಿಕೋಲಾಯ್ ಸಚ್‌ದೇವ್ 14 ವರ್ಷಗಳಿಂದ ಸ್ನೇಹಿತರಾಗಿದ್ದು, ತಮ್ಮ ಪೋಷಕರ ಒಪ್ಪಿಗೆ ಪಡೆದು ಸ್ನೇಹಿತರು-ಪ್ರೀತಿ ಪಾತ್ರರ ಸಮ್ಮುಖದಲ್ಲಿ ಮಾರ್ಚ್ 01ರಂದು ಉಂಗುರಗಳನ್ನು ಬದಲಾಯಿಸಿಕೊಂಡಿದ್ದಾರೆ.
ಇದೇ ವರ್ಷದ ಕೊನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಈ ಜೋಡಿ ಯೋಜಿಸಿದ್ದು, ಶೀಘ್ರದಲ್ಲೇ ಮದುವೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ತಮ್ಮ ನೆಚ್ಚಿನ ನಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು, ಚಿತ್ರರಂಗದವರು ಅಭಿನಂದನೆ ಜತೆಗೆ ಶುಭಹಾರೈಕೆಗಳನ್ನು ತಿಳಿಸಿದ್ದಾರೆ,(ಏಜೆನ್ಸೀಸ್).