More

    ನರೇಗಾ ಹೆಚ್ಚುವರಿ 50 ದಿನದ ಕೂಲಿ ಕೊಡಿ; ಎಸ್‌ಯುಸಿಐನಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ

    ಹಾವೇರಿ: ನರೇಗಾ ಯೋಜನೆಯಡಿ ಈಗಾಗಲೇ 100 ದಿನದ ಕೂಲಿ ಕೆಲಸ ಪೂರ್ಣಗೊಳಿಸಿರುವವರಿಗೆ ಬರಗಾಲದ ಹಿನ್ನೆಲೆಯಲ್ಲಿ ನರೇಗಾ ಯೋಜನೆ ಅಡಿ ಹೆಚ್ಚುವರಿ 50 ದಿನಗಳ ಕೆಲಸವನ್ನು ಕೂಡಲೇ ನೀಡಬೇಕು, ನರೇಗಾ ಯೋಜನೆಯ ಮತ್ತಿತರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ (ಎಸ್‌ಯುಸಿಐ) ವತಿಯಿಂದ ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಯಿತು.
    ಬರಗಾಲದ ಹಿನ್ನೆಲೆಯಲ್ಲಿ ಹೆಚ್ಚುವರಿ 50 ದಿನಗಳ ಕೆಲಸ ನೀಡಬೇಕಾದ ಸರ್ಕಾರಗಳು ಕಣ್ಮುಚ್ಚಿ ಕುಳಿತಿವೆ. ಕೂಲಿ ಕೆಲಸವಿಲ್ಲದೆ ಕೃಷಿ ಕಾರ್ಮಿಕರು ಗುಳೆ ಹೋಗುವಂತಾಗಿದೆ. ನರೇಗಾ ಯೋಜನೆಯಡಿ ವರ್ಷಕ್ಕೆ 200 ದಿನಗಳ ಕೆಲಸ ನೀಡಬೇಕು ಹಾಗೂ ಕೂಲಿಯನ್ನು 600 ರೂ.ಗೆ ಹೆಚ್ಚಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
    ರೈತರ ಬದುಕು ತೀವ್ರ ಸಂಕಷ್ಟದಿಂದ ಕೂಡಿದೆ. ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ವಾಗ್ದಾನ ನೀಡಿದ್ದ ಕೇಂದ್ರ ಸರ್ಕಾರ ದೆಹಲಿ ಹೋರಾಟ ನಡೆದು ಎರಡು ವರ್ಷಗಳ ನಂತರವೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದ ಬಗರ್ ಹುಕುಂ ಸಾಗುವಳಿದಾರರು ಭೂಮಿಯ ಹಕ್ಕುಪತ್ರಗಳಿಗಾಗಿ ಸತತವಾಗಿ ಹೋರಾಡುತ್ತಿದ್ದಾರೆ. ಕೈಗಾರಿಕೋದ್ಯಮಿಗಳಿಗೆ ರಾತ್ರೋರಾತ್ರಿ ಭೂಮಿ ಮಂಜೂರು ಮಾಡುವ ಸರ್ಕಾರಗಳು ಬಡವರಿಗೆ ತುಂಡು ಭೂಮಿ ಕೊಡಲು ಮೀನಾಮೇಷ ಎಣಿಸುತ್ತವೆ.
    ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ದನಕರುಗಳಿಗೆ ಮೇವು ಪೂರೈಸಬೇಕು. ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಅವಶ್ಯಕತೆಗನುಗುಣವಾಗಿ ತಜ್ಞ ವೈದ್ಯ, ಸಿಬ್ಬಂದಿ ನೇಮಕಾತಿ ಮಾಡಬೇಕು. ಪಡಿತರದಲ್ಲಿ ಅಕ್ಕಿ ಜೊತೆಗೆ ಗೋಧಿ, ಜೋಳ, ಅಡುಗೆ ಎಣ್ಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
    ಎಸ್‌ಯುಸಿಐ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ, ಗಂಗಾಧರ ಬಡಿಗೇರ, ರಾಜು ಆಲದಹಳ್ಳಿ, ಗಣೇಶಪ್ಪ ನಾಗನಗೌಡರ, ನೀಲಮ್ಮ ಕೊರವರ, ಚಂದ್ರಣ್ಣ ಕಜ್ಜೇರ, ಮೌಲಾಲಿ ಚಿಕ್ಕಳ್ಳಿ, ಅಂಜಿನಪ್ಪ ಹಾದಿಮನಿ, ಕುಬೇರಪ್ಪ ಹೊಸಮನಿ, ಹನುಮಂತ ತಳವಾರ, ಮಂಜಪ್ಪ ಹಿರೇಕೌನ್ಸಿ, ಭವಾನಿಶಂಕರಗೌಡ, ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts