More

  ಉತ್ಸಾಹದಿಂದ ಮತ ಚಲಾಯಿಸಿದ ಹಿರಿಯರು, ವಿಶೇಷ ಚೇತನರು; ಮನೆ ಮನೆ ಮತದಾನಕ್ಕೆ ಡಿಸಿ ರಘುನಂದನ ಮೂರ್ತಿ ಚಾಲನೆ

  ಹಾವೇರಿ: ಲೋಕಸಭಾ ಚುನಾಚಣೆ ಅಂಗವಾಗಿ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು ಹಾಗೂ ವಿಶೇಷ ಚೇತನ ಮತದಾರರಿಗೆ ಭಾರತ ಚುನಾವಣಾ ಆಯೋಗ ಮಾರ್ಗಸೂಚಿಯಂತೆ ಮನೆಯಲ್ಲೇ ಮತದಾನ ಮಾಡುವ ಪ್ರಕ್ರಿಯೆಗೆ ನಗರದಲ್ಲಿ ಶನಿವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ಚಾಲನೆ ನೀಡಿದರು.
  ನಗರದ ವಿದ್ಯಾನಗರ ಬಡಾವಣೆ ಸಿ ಬ್ಲಾಕ್ ನಿವಾಸಿ 87 ವರ್ಷದ ಯಮುನಾಬಾಯಿ ಪವಾರ ಎಂಬುವರ ಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಚುನಾವಣಾ ಪ್ರಕ್ರಿಯೆ ಪರಿಶೀಲಿಸಿದರು. ಬ್ಯಾಲೆಟ್ ಮೂಲಕ ಯಮುನಾಬಾಯಿ ಗೌಪ್ಯ ಮತ ಚಲಾಯಿಸಿದರು. ಹಾವೇರಿ ಉಪವಿಭಾಗಾಧಿಕಾರಿ ಹಾಗೂ ಕ್ಷೇತ್ರ ಚುನಾವಣಾಧಿಕಾರಿ ಚನ್ನಪ್ಪ ಎಚ್.ಬಿ. ಹಾಗೂ ತಹಸೀಲ್ದಾರ ನಾಗರಾಜ ಮಾರ್ಗದರ್ಶನದಲ್ಲಿ ಮತಗಟ್ಟೆ ಅಧಿಕಾರಿ ಬಿ.ಎನ್.ಯಲಿಗಾರ ಹಾಗೂ ರಾಜು ಮತದಾನ ಪ್ರಕ್ರಿಯೆ ವ್ಯವಸ್ಥೆ ಮಾಡಿದ್ದರು. ಮತದಾನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಯಿತು. ನಂತರ ವಿದ್ಯಾನಗರ ಪೂರ್ವ ಬಡಾವಣೆ 1ನೇ ಕ್ರಾಸ್ ನಿವಾಸಿ ಇಂದಿರಾ ಪಾಟೀಲ ಮನೆಗೆ ತೆರಳಿ ಮತದಾನ ಪ್ರಕ್ರಿಯೆ ಮುಂದುವರಿಸಲಾಯಿತು.
  ಮನೆಯಲ್ಲೇ ಮತದಾನ ಮಾಡಿದ ಹಿರಿಯ ನಾಗರಿಕರು ಸಂತಸ ವ್ಯಕ್ತಪಡಿಸಿದರು. ಚುನಾವಣಾ ಆಯೋಗ ವಿಕಲಚೇತನರಿಗೆ, ವಯೋವೃದ್ದರಿಗೆ ಮನೆಯಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು ಖುಷಿಯಾಯಿತು. ಜತೆಗೆ ನಮ್ಮ ಮತದಾನ ಹಕ್ಕು ರಕ್ಷಣೆ ಮಾಡಿದ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
  ಕೋಟ್:
  ನನಗೆ 87 ವರ್ಷ ವಯಸ್ಸಾಗಿದೆ. ನಡೆಯಲು ಸಾಧ್ಯವಿಲ್ಲ. ಮತಗಟ್ಟೆಗೆ ತೆರಳಲು ಕಷ್ಟವಾಗುತ್ತಿತ್ತು. ಮತ ಚಲಾಯಿಸಬೇಕೆಂಬ ನನ್ನ ಇಚ್ಛೆಗೆ ಜಿಲ್ಲಾಡಳಿತ ನೆರವು ನೀಡಿದೆ. ಎಲ್ಲರಿಗಿಂತ ಮುಂಚಿತವಾಗಿ ಮನೆಯಲ್ಲೇ ಮತದಾನ ಮಾಡಿದ್ದು ನನಗೆ ಸಂತಸ ತಂದಿದೆ. ಮನೆಯಲ್ಲೇ ಮತದಾನಕ್ಕೆ ಅವಕಾಶ ಮಾಡಿಕೊಟ್ಟ ಜಿಲ್ಲಾ ಚುನಾವಣಾಧಿಕಾರಿ ಹಾಗೂ ತಂಡಕ್ಕೆ ಧನ್ಯವಾದಗಳು.
  – ಯಮುನಾಬಾಯಿ ಪವಾರ, 87 ವರ್ಷದ ಹಿರಿಯ ಮತದಾರರು, ಹಾವೇರಿ

  ಕೋಟ್:
  85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಮನೆಯಿಂದ ಮತದಾನಕ್ಕೆ ಅವಕಾಶ ನೀಡಿದ್ದು, ಇನ್ನೂ ಎರಡು ದಿನಗಳ ಕಾಲ ಈ ಪ್ರಕ್ರಿಯೆ ಜಿಲ್ಲೆಯಾದ್ಯಂತ ನಡೆಯಲಿದೆ. ನೋಂದಾಯಿಸಿದ ಪ್ರತಿವೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಬೇಕು.
  – ಅಕ್ಷಯ ಶ್ರೀಧರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಪಂ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts