ನ್ಯೂಸ್

'ಟಗರು ಪಲ್ಯ' ಟ್ರೇಲರ್​ ಲಾಂಚ್​: ನಟಿ ತಾರಾ ಮನದಾಳದ ಮಾತು

ಬೆಂಗಳೂರು: ನಟ ನಾಗಭೂಷಣ್​ ಮತ್ತು ನೆನಪಿರಲಿ ಪ್ರೇಮ್​ ಪುತ್ರಿ ಅಮೃತಾ ಪ್ರೇಮ್​ ನಾಯಕ-ನಾಯಕಿಯಾಗಿ ಅಭಿನಯಿಸಿರುವ 'ಟಗರು ಪಲ್ಯ' ಚಿತ್ರದ ಟ್ರೇಲರ್​ ರಿಲೀಸ್​ ಇವೆಂಟ್​ ಇಂದು ಅಧಿಕೃತವಾಗಿ ನಡೆಯಿತು. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸ್ಯಾಂಡಲ್​ವುಡ್​ನ ಹಿರಿಯ ನಟಿ ತಾರ ಅನುರಾಧ ಅವರು ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಬಗ್ಗೆ ಒಂದು ಕುತೂಹಲಕಾರಿ ವಿಚಾರವನ್ನು ಹಂಚಿಕೊಂಡರು.

ಡಾಲಿ ಫಿಕ್ಚರ್ಸ್​​ ಬ್ಯಾನರ್​ನಡಿ ಡಾಲಿ ಧನಂಜಯ್​ ನಿರ್ಮಿಸಿದ ಈ ಚಿತ್ರಕ್ಕೆ ಅತಿಥಿಯಾಗಿ ದರ್ಶನ್ ಆಗಮಿಸಿದ್ದರು. ವೇದಿಕೆ ಮೇಲೆ ಮಾತನಾಡುತ್ತಿದ್ದ ತಾರಾ, "ನನಗೆ ದರ್ಶನ್​ ಬಂದಿದ್ದು ಬಹಳ ಖುಷಿ ತಂದಿದೆ. ನೀನು ಇಲ್ಲಿಗೆ ಬಂದು ಸಿನಿಮಾದ ಟ್ರೇಲರ್​ ರಿಲೀಸ್​ ಮಾಡಿದ್ದಕ್ಕೆ ನನ್ನ ಕಡೆಯಿಂದ ಹಾಗೂ ಚಿತ್ರತಂಡದಿಂದ ಧನ್ಯವಾದ ತಿಳಿಸುತ್ತೀನಿ. ಒಳ್ಳೆಯ ಮನಸ್ಸುಗಳು ಒಟ್ಟುಗೂಡಿದಾಗ ಗೆಲುವು ಕಟ್ಟಿಟ್ಟಬುತ್ತಿ" ಎಂದು ಹೇಳಿದರು.

ಇನ್ನೂ ದರ್ಶನ್​ ಅವರನ್ನು ಮೊದಲಿಗೆ ಅಪ್ಪು ಎಂದು ಕರೆದ ತಾರಾ, "ಕ್ಷಮಿಸಿ ಅಪ್ಪು ಅಂತ ದರ್ಶನ್​ ಮನೆಯಲ್ಲಿ ಅವರ ತಾಯಿ ಮತ್ತು ಸಹೋದರಿ ಪ್ರೀತಿಯಿಂದ ಕರೆಯುತ್ತಾರೆ. ಹಾಗಾಗಿ ನಾನೂ ಕೂಡ ದರ್ಶನ್​ನ ಹಾಗೆಯೇ ಕರೆಯೋದು, ನನಗೂ ಹಾಗೇ ಕರೆದು ಅಭ್ಯಾಸ" ಎಂದು ಹೇಳಿದರು.