ನ್ಯೂಸ್

ಬಾಲಿವುಡ್​ ನಟಿ ಶಿಲ್ಪ ಶೆಟ್ಟಿ ಕುಟುಂಬದ ಆರು ಜನಕ್ಕೆ ಕರೊನಾ

ಮುಂಬೈ : ಬಾಲಿವುಡ್​ ನಟಿ ಮತ್ತು ಫಿಟ್​​ನೆಸ್​ ದಿವಾ ಶಿಲ್ಪ ಶೆಟ್ಟಿ ಅವರ ಹೊರತಾಗಿ, ಅವರ ಕುಟುಂಬದ ಎಲ್ಲಾ ಸದಸ್ಯರಿಗೂ ಕರೊನಾ ಸೋಂಕು ತಗುಲಿದೆ. ಈ ಬಗ್ಗೆ ಶೆಟ್ಟಿ ಅವರು ತಮ್ಮ ಇನ್​​ಸ್ಟಾಗ್ರಾಂ ಪೋಸ್ಟ್​ನಲ್ಲಿ ತಿಳಿಸಿದ್ದು, ಕಳೆದ 10 ದಿನಗಳು ತುಂಬಾ ಕಷ್ಟಕರವಾಗಿದ್ದವು ಎಂದು ಬರೆದಿದ್ದಾರೆ.

ಮೊದಲು ನನ್ನ ಅತ್ತೆ-ಮಾವನಿಗೆ ಕರೊನಾ ಪಾಸಿಟೀವ್​ ಬಂತು. ನಂತರ ಒಂದು ವರ್ಷದ ಮಗಳು ಸಮೀಶಾ, ಮಗ ವಿಯಾನ್-ರಾಜ್, ನನ್ನ ತಾಯಿ ಮತ್ತು ಕೊನೆಗೆ ಪತಿ ರಾಜ್ ಕುಂದ್ರ​​ಗೆ ಕರೊನಾ ಪಾಸಿಟೀವ್ ಬಂತು. ನಿಯಮಾನುಸಾರ ಎಲ್ಲರೂ ಅವರವರ ಕೋಣೆಗಳಲ್ಲಿ ಐಸೊಲೇಟ್​ ಆಗಿದ್ದು, ವೈದ್ಯರ ಸಲಹೆಯಂತೆ ನಡೆದುಕೊಳ್ಳುತ್ತಿದ್ದಾರೆ. ದೇವರ ಕೃಪೆಯಿಂದ ಎಲ್ಲರೂ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ ಎಂದು ಶಿಲ್ಪ ಬರೆದಿದ್ದಾರೆ.

ಅವರ ಮನೆಗೆಲಸದ ಸಿಬ್ಬಂದಿಯಲ್ಲಿ ಇಬ್ಬರಿಗೆ ಕರೊನಾ ಪಾಸಿಟೀವ್ ಬಂದಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದೂ ಬರೆದಿರುವ ಶೆಟ್ಟಿ ತಮಗೆ ಪರೀಕ್ಷೆಗಳಲ್ಲಿ ನೆಗೆಟೀವ್ ವರದಿ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.

ನಮಗಾಗಿ ಪ್ರಾರ್ಥನೆ ಮಾಡಿ ಎಂದು ತಮ್ಮ ಅಭಿಮಾನಿಗಳನ್ನು ಕೇಳಿರುವ ಶಿಲ್ಪಾ ಶೆಟ್ಟಿ, "ಮಾಸ್ಕ್​ ಧರಿಸಿ, ಸ್ಯಾನಿಟೈಸ್ ಮಾಡಿಕೊಳ್ಳಿ, ಸುರಕ್ಷಿತವಾಗಿರಿ" ಎಂದು ಬರೆದಿದ್ದಾರೆ. ಜೊತೆಗೆ, "ಕೋವಿಡ್​ ಪಾಸಿಟೀವ್ ಆಗಿರಲಿ ಬಿಡಲಿ, ಮಾನಸಿಕವಾಗಿ ಮಾತ್ರ ಪಾಸಿಟೀವ್ ಆಗಿರಿ" ಎಂದು ಸಲಹೆ ನೀಡಿದ್ದಾರೆ. (ಏಜೆನ್ಸೀಸ್)