ಮುಂಬೈ: ನಟನೆಯಾದರೂ ಸೈ, ರಾಷ್ಟ್ರ ಸೇವೆಯಾದರೂ ಸೈ ಎಂಬ ಮಾತನ್ನು ಬಾಲಿವುಡ್ನ ನಟಿಯೊಬ್ಬರು ಸಾಬೀತುಪಡಿಸಿ ತೋರಿಸಿದ್ದಾರೆ.
ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ನಾಯಕ ನಟರಾಗಿ ನಟಿಸಿದ್ದ ಫ್ಯಾನ್ ಎಂಬ ಚಿತ್ರದಲ್ಲಿ ನಟಿಸಿ ಗಮನಸೆಳೆದಿದ್ದ ಶಿಖಾ ಮಲ್ಹೋತ್ರಾ ಇದೀಗ ಏಪ್ರನ್ ತೊಟ್ಟು, ನರ್ಸ್ ಪಾತ್ರ ಧರಿಸಿ ಕೋವಿಡ್ 19 ಸೋಂಕಿತರ ಸೇವೆಗೆ ಮುಂದಾಗಿದ್ದಾರೆ. ಸ್ವಪ್ರೇರೇಣೆಯ ಮೇರೆಗೆ ಕರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿನ ತಮ್ಮ ಖಾತೆಯಲ್ಲಿ ಈ ವಿಷಯ ಹೇಳಿಕೊಂಡಿರುವ ಅವರು, ರಾಷ್ಟ್ರ ಸಂಕಷ್ಟಮಯ ಪರಿಸ್ಥಿತಿ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಸ್ವಯಂಸೇವಕಿಯಾಗಿ ರೋಗಿಗಳ ಸೇವೆಯಲ್ಲಿ ತೊಡಗಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಹೇಳಿದ್ದಾರೆ.
ದೆಹಲಿಯ ವರ್ದಮಾನ್ ಮಹಾವೀರ ವೈದ್ಯಕೀಯ ಕಾಲೇಜು ಮತ್ತು ಸಪ್ದರ್ಜಂಗ್ ಆಸ್ಪತ್ರೆಯಿಂದ ಬಿ.ಎಸ್ಸಿ (ನರ್ಸಿಂಗ್) ಡಿಗ್ರಿ ಪಡೆದಿರುವ ಅವರು, ಆಕಸ್ಮಿಕವಾಗಿ ಬಾಲಿವುಡ್ಗೆ ಬಂದವರು. ಸದ್ಯ ಅವರು ಮುಂಬೈನ ಬಾಲಾ ಸಾಹೇಬ್ ಠಾಕ್ರೆ ಟ್ರಾಮ ಸೆಂಟರ್ನಲ್ಲಿ ಸ್ವಯಂಸೇವಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಾನು ಒಬ್ಬ ನರ್ಸ್ ಆಗಿ, ಒಬ್ಬ ನಟಿಯಾಗಿ ಎಲ್ಲಿ ನನ್ನ ಅಗತ್ಯವಿದೆಯೋ ಅಲ್ಲೆಲ್ಲ ದೇಶಕ್ಕಾಗಿ ಕೆಲಸ ಮಾಡಲು ಸದಾ ಸಿದ್ಧಳಿದ್ದೇನೆ. ಇದಕ್ಕಾಗಿ ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದದ ಅಗತ್ಯ ಇದೆ. ನಮ್ಮ ಕೆಲಸವನ್ನು ನಮಗೆ ಮಾಡಲು ಬಿಟ್ಟು ಉಳಿದವರು ಮನೆಯಲ್ಲೇ ಇರುವ ಮೂಲಕ ರಾಷ್ಟ್ರದ ಒಳಿತಿಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ದೇಶ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಆದ್ದರಿಂದ, ವೈದ್ಯರು, ನರ್ಸಿಂಗ್ ಸೇರಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ಪದವಿ ಹೊಂದಿರುವವರೆಲ್ಲರೂ ಸ್ವಪ್ರೇರಣೆಯಿಂದ ಕರೊನಾ ವಾರಿಯರ್ಗಳಾಗಲು ಮುಂದಾಗಬೇಕು ಎಂದು ಅವರು ಕೋರಿಕೊಂಡಿದ್ದಾರೆ.