ನ್ಯೂಸ್

ಕನ್ನಡತಿ ಖ್ಯಾತಿಯ ರಂಜನಿ ರಾಘವನ್​ಗೆ ಒಲಿದು ಬಂತು 'ಯುವ ಸಾಹಿತ್ಯ ರತ್ನ' ಪ್ರಶಸ್ತಿ

ಬೆಂಗಳೂರು: ‘ಕನ್ನಡತಿ’ ಖ್ಯಾತಿಯ ರಂಜನಿ ರಾಘವನ್ ಬರೀ ನಟಿಯಾಗಿಯಷ್ಟೇ ಅಲ್ಲ, ಬರಹಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಹಲವು ಕಥೆಗಳನ್ನು ರಚಿಸಿರುವ ಅವರು, ಕಥೆಗಾರ್ತಿಯಾಗಿಯೂ ಜನಪ್ರಿಯರಾಗಿದ್ದಾರೆ. ಇದಲ್ಲದೆ ಕನ್ನಡ ಓದಲು ಮತ್ತು ಕಲಿಯಲು ಬಯಸುವವರಿಗೆ ಲ್ರೈಬರಿಯನ್ನು ಸಹ ತೆರೆದಿದ್ದಾರೆ. ಇದೀಗ ಇವರ ಸಾಹಿತ್ಯ ಪ್ರೇಮವನ್ನು ಗುರುತಿಸಿ ಸಂಸ್ಥೆಯೊಂದು ಇವರಿಗೆ ಯುವ ಸಾಹಿತ್ಯ ರತ್ನ ಎಂಬ ಬಿರುದನ್ನು ನೀಡಿ ಪ್ರಶಸ್ತಿ ಪ್ರದಾನ ಮಾಡಿದೆ.

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ನಟಿ ರಂಜನಿ ರಾಘವನ್​ ಅವರಿಗೆ ಸನ್ಮಾನಿಸಲಾಗಿದ್ದು, ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ಪೋಸ್ಟ್​​ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಈ ಕುರಿತು ಮಾತನಾಡಿರುವ ನಟಿ ರಂಜನಿ ರಾಘವನ್​, ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ನನಗೆ ಯುವ ಸಾಹಿತ್ಯ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಹಿಂದೆ ನಾನು ಬರೆದಿದ್ದ ಕಥೆ ಡಬ್ಬಿ ಸಂಕಲನವನ್ನು ಬಹಳಷ್ಟು ಮಂದಿ ಓದಿ ಮೆಚ್ಚಿಕೊಂಡಿದ್ದರು. ಇದೀಗ Swipe Right ಕಾದಂಬರಿಯನ್ನು ಕಾದಂಬರಿಯಲ್ಲಿ ನನ್ನ ಬರಹವನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು, ಬಹಳ ಖುಷಿಯಾಗಿದೆ.

ನಾನು ಬಗಳ ಮುಜುಗರದಿಂದ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ. ಈ ಪ್ರಶಸ್ತಿಯನ್ನು ನಾನು ಎಲ್ಲಾ ಯುವ ಸಾಹಿತಿಗಳಿಗೆ, ಓದುಗರಿಗೆ ಅಭಿಮಾನಿಗಳಿಗೆ ಅರ್ಪಿಸುತ್ತಿದ್ಧೇನೆ. ಅಭಿಮಾನಿಗಳು ನನಗೆ ನೀಡಿರುವ ಸಪೋರ್ಟ್​ಅನ್ನು ಎಂದಿಗೂ ಮರೆಯುವುದಿಲ್ಲ. ವಿಶೇಷವಾಗಿ ಮುದ್ರಕರಿಗೆ ಹಾಗೂ ನನ್ನ ಬರವಣಿಗೆಯನ್ನು ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಹೇಳುತ್ತೇನೆ. ಹೀಗೆ ಸಪೋರ್ಟ್​ ಮಾಡುತ್ತೀರಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ನೀಡುತ್ತೇನೆ ಎಂದು ನಟಿ ರಂಜನಿ ರಾಘವನ್​ ಹೇಳಿದ್ದಾರೆ.