ಬೆಂಗಳೂರು: ಮಾಜಿ ಸಂಸದೆ ಮತ್ತು ನಟಿ ರಮ್ಯಾ ಇದೀಗ ತುಂಬಾ ಖುಷಿಯಲ್ಲಿರುವುದನ್ನು ವ್ಯಕ್ತಪಡಿಸಿದ್ದಾರೆ. ಮೂರು ದಿನಗಳ ಹಬ್ಬವಾದ ದೀಪಾವಳಿಯ ಮೂರನೇ ದಿನದಲ್ಲಿ ಅವರು ಇಂಥದ್ದೊಂದು ಸಂತೋಷವನ್ನು ಹಂಚಿಕೊಳ್ಳಲಿಕ್ಕೂ ಮೂರು ಕಾರಣಗಳಿವೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ನೂತನ ಅಧ್ಯಕ್ಷರಾಗಿ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ ಬೆನ್ನಿಗೇ ನಟಿ ರಮ್ಯಾ ಈ ಸಂತಸವನ್ನು ಹಂಚಿಕೊಂಡಿದ್ದಾರೆ. ಖರ್ಗೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತ ಅವರು ತಮ್ಮ ಸಂತಸವನ್ನು ಹೀಗೆ ಹೇಳಿಕೊಂಡಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕನ್ನಡಿಗ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಿದ ರಮ್ಯಾ, ಕರ್ನಾಟಕದ ಅಳಿಯ ಎಂದು ಕರೆಯಲ್ಪಡುವವರು ಬ್ರಿಟನ್ ಪ್ರಧಾನಿಯಾಗಿದ್ದಾರೆ, ಕಾಂತಾರ ಸಿನಿಮಾ ಭಾರತದ ಗಲ್ಲಾಪೆಟ್ಟಿಗೆಯನ್ನೇ ಆಳುತ್ತಿದೆ. ಒಟ್ಟಿನಲ್ಲಿ ಕನ್ನಡಿಗರು ಎತ್ತರಕ್ಕೆ ಹೋಗುತ್ತಿದ್ದಾರೆ, ಕರ್ನಾಟಕದ ಬಾವುಟ ಎತ್ತರದಲ್ಲಿ ಹಾರುತ್ತಿದೆ ಎಂದು ತಮ್ಮ ಸಂಭ್ರಮವನ್ನು ಹೇಳಿಕೊಳ್ಳುತ್ತ ಕನ್ನಡದ ಅಭಿಮಾನವನ್ನು ಮೆರೆದಿದ್ದಾರೆ.