ಬೆಂಗಳೂರು: ವೀಕೆಂಡ್ ವಿದ್ ರಮೇಶ್ ಶೋನ ಸೀಸನ್-5ರ ಮೊದಲ ಅತಿಥಿಯಾಗಿ ಆಗಮಿಸಿದ್ದ ನಟಿ ರಮ್ಯಾ, ಮೆಚ್ಚುಗೆಗೆ ಪಾತ್ರವಾಗಿದ್ದಕ್ಕಿಂತ ಟ್ರೋಲ್ಗೆ ಒಳಗಾಗಿದ್ದೇ ಹೆಚ್ಚು. ಅದರಲ್ಲೂ ಆಕೆಯ ವಿರುದ್ಧ ಕನ್ನಡಿಗರು ಕಿಡಿಕಾರಿದ್ದೂ ಕಂಡುಬಂದಿದೆ.
ಮೋಹಕತಾರೆ ಎಂದು ಕರೆಯಲಾಗುವ, ಮಾಜಿ ಸಂಸದೆಯೂ ಆಗಿರುವ ನಟಿ ರಮ್ಯಾ ಇಂಗ್ಲಿಷ್ ಮೋಹದಿಂದಾಗಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನಡ ವಾಹಿನಿಯ ಕನ್ನಡದ ಶೋನಲ್ಲೇ ರಮ್ಯಾ ಅದ್ಯಾಕೆ ಅಷ್ಟೊಂದು ಇಂಗ್ಲಿಷ್ ಮಾತನಾಡಿದರು ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ತೀಕ್ಷ್ಣವಾಗಿಯೇ ಟೀಕಿಸಿದ್ದಾರೆ.
ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಇಡೀ ಶೋನಲ್ಲಿ ರಮ್ಯಾ ಕನ್ನಡಕ್ಕಿಂತ ಇಂಗ್ಲಿಷ್ ಬಳಸಿದ್ದೇ ಹೆಚ್ಚು ಎಂಬುದೇ ವೀಕ್ಷಕರ ತಕರಾರು. ಹೀಗಾಗಿ ಕನ್ನಡಿಗರು ಒಂದೆಡೆ ಅವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಪೋಸ್ಟ್ ಮಾಡಿಕೊಂಡರೆ, ರಾಜಕೀಯ ಕಾರಣಕ್ಕೆ ಇತರ ಪಕ್ಷಗಳ ಕಾರ್ಯಕರ್ತರೂ ಇದೇ ವಿಚಾರವನ್ನು ನೆಪವಾಗಿಸಿಕೊಂಡು ರಮ್ಯಾ ವಿರುದ್ಧ ಹರಿಹಾಯ್ದಂಥ ಪೋಸ್ಟ್ಗಳೂ ಕಂಡುಬಂದಿವೆ.
ವೀಕೆಂಡ್ ವಿದ್ ರಮೇಶ್ ಶೋ ನೋಡಲು ಕುಳಿತ ಕನ್ನಡಿಗರಿಗೆ ರಮ್ಯಾ ಅತಿಯಾಗಿ ಆಡಿದ ಇಂಗ್ಲಿಷ್ ಮಾತುಗಳು ಕಿರಿಕಿರಿ ಉಂಟುಮಾಡಿವೆ. ಕನ್ನಡದ ಕಾರ್ಯಕ್ರಮವಾದರೂ ಆಕೆ ಅಲ್ಲಿ ಕನ್ನಡಕ್ಕೆ ಆದ್ಯತೆ ನೀಡದ್ದರಿಂದ ಅದು ಯಾವುದೋ ಕಂಗ್ಲಿಷ್ ಕಾರ್ಯಕ್ರಮದಂತೆ ಅನಿಸಿತು ಎಂದೂ ಜನರು ಆಡಿಕೊಂಡಿದ್ದಾರೆ.