ನ್ಯೂಸ್

ನಟಿ ರಾಗಿಣಿ ದ್ವಿವೇದಿ ಕಾಲಿಗೆ ಪೆಟ್ಟು; ಸಿನಿಮಾ ಚಿತ್ರೀಕರಣ ಕ್ಯಾನ್ಸಲ್​

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ರಾಗಿಣಿ ದ್ವಿವೇದಿ ಸಾಲುಸಾಲು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಮದನಿಕ ಸಿನಿಮಾ ಚಿತ್ರೀಕರಣದ ವೇಳೆ ಅವರ ಕಾಲಿಗೆ ಪೆಟ್ಟಾಗಿದ್ದು, ಶೂಟಿಂಗ್​ ಕ್ಯಾನ್ಸಲ್​ ಮಾಡಲಾಗಿದೆ.

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಈ ಚಿತ್ರದ ಶೂಟಿಂಗ್​ ಸಮಯದಲ್ಲಿ ರಾಗಿಣಿ ಅವರಿಗೆ ಏಟುಬಿದ್ದಿದ್ದು, ಶೂಟಿಂಗ್ ಕೆಲವು ದಿನಗಳ ಕಾಲ​ ನಿಲ್ಲಿಸಲಾಗಿದೆ. ಈ ಕುರಿತು ನಟಿ, ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

ಈ ಚಿತ್ರದಲ್ಲಿ ರಾಗಿಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರವು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಬೆಂಗಳೂರು ಸ್ಟುಡಿಯೋಸ್​ನಲ್ಲಿ ಶೂಟಿಂಗ್​ ನಡೆಯುತ್ತಿದ್ದ ಸಮಯದಲ್ಲಿ ಅವಘಡ ಸಂಭವಿಸಿದ್ದು, ಚಿಕಿತ್ಸೆ ನಂತರ ವೈದ್ಯರು ಒಂದು ವಾರ ವಿಶ್ರಾಂತಿಗೆ ಸೂಚಿಸಿರುವ ಕಾರಣ, ರೆಸ್ಟ್​ ಮಾಡುತ್ತಿದ್ದಾರೆ.

ನಟಿಯ ಕಾಲಿಗೆ ಪೆಟ್ಟಾಗಿರುವ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ನೋವಿನ ನಡುವೆಯೂ ನಟಿ ನಗುತ್ತಿರುವುದನ್ನು ನೋಡಬಹುದು. ನಟಿಯ ಕಾಲಿಗೆ ಸ್ವಲ್ಪ ಫ್ರ್ಯಾಕ್ಚರ್​ ಆಗಿದ್ದು, ಗಂಭೀರ ಸಮಸ್ಯೆ ಏನೂ ಇಲ್ಲ ಎಂದು ವೈದ್ಯರು ಹೇಳಿರುವುದಾಗಿ ವರದಿ ಆಗಿದೆ.

ರಾಗಿಣಿ ನಾಯಕಿಯಾಗಿ ನಟಿಸಿರುವ ‘ಬಿಂಗೊ’ ಚಿತ್ರದ ಶೂಟಿಂಗ್​ ಇತ್ತೀಚೆಗೆ ಮುಕ್ತಾಯವಾಗಿದೆ. ಶಂಭೋ ಶಿವ ಶಂಕರ ಚಿತ್ರ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ ನಿರ್ದೇಶನದ ಈ ಚಿತ್ರದಲ್ಲಿ ಆರ್.ಕೆ ಚಂದನ್ ನಾಯಕನಾಗಿ ನಟಿಸುತ್ತಿದ್ದಾರೆ. ಇದರ ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಈ ನಡುವೆ ಮದನಿಕ ಶೂಟಿಂಗ್​ ಸಮಯದಲ್ಲಿ ಅವಘಡ ಸಂಭವಿಸಿದೆ.