ಆಂಧ್ರಪ್ರದೇಶ: ಒಂದು ಕಾಲದಲ್ಲಿ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸ್ಟಾರ್ ನಾಯಕಿಯಾಗಿ ಮೆರೆದ ಪ್ರಿಯಾಮಣಿ ಈಗ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮಿಂಚುತ್ತಿದ್ದಾರೆ. ಅಂದಹಾಗೆ ಪ್ರಿಯಾಮಣಿ ಇತ್ತೀಚೆಗೆ 'ನೋ ಕಿಸ್ಸಿಂಗ್ ಪಾಲಿಸಿ' ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ನಾಗ ಚೈತನ್ಯ ಅಭಿನಯದ 'ಕಸ್ಟಡಿ' ಚಿತ್ರದಲ್ಲಿ ಪ್ರಿಯಾಮಣಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ಚಿತ್ರವು ಸಿನಿಮಾ ಪ್ರೇಮಿಗಳನ್ನು ನಿರಾಸೆಗೊಳಿಸಿತ್ತು. ಆದರೆ ಈ ಚಿತ್ರದಲ್ಲಿ ಪ್ರಿಯಾಮಣಿ ಅದ್ಭುತವಾಗಿ ಅಭಿನಯಿಸಿದ್ದರು. ಪ್ರಸ್ತುತ ಪ್ರಿಯಾಮಣಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್, ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅಭಿನಯದ ಬಾಲಿವುಡ್‌ನ ದೊಡ್ಡ ಬಜೆಟ್ ಚಿತ್ರ ಜವಾನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಪ್ರಿಯಾಮಣಿ ‘ನೋ ಕಿಸ್ಸಿಂಗ್ ಪಾಲಿಸಿ’ ಕುರಿತು ಪ್ರತಿಕ್ರಿಯಿಸಿ, ಚುಂಬನದ ದೃಶ್ಯಗಳಲ್ಲಿ ನಟಿಸದಿರುವುದಕ್ಕೆ ಕಾರಣ ವಿವರಿಸಿದರು.
"ವಿಶೇಷವಾಗಿ ಮದುವೆಯಾದ ನಂತರ ಈ ನಿಯಮ ಹೆಚ್ಚಾಗಿ ಪಾಲಿಸುತ್ತಿದ್ದೇನೆ. ಮದುವೆಯಾದ ನಂತರ, ನಾನು ಚಿತ್ರಗಳಲ್ಲಿ ಚುಂಬನದ ದೃಶ್ಯಗಳಲ್ಲಿ ನಟಿಸಬಾರದೆಂದು ತೀರ್ಮಾನಿಸಿದೆ. ಯಾವುದೇ ಸಿನಿಮಾ ಮಾಡಿದರೂ ಅದನ್ನು ತಂದೆ-ತಾಯಿ ಮತ್ತು ಸಂಬಂಧಿಕರು ನೋಡುತ್ತಾರೆ. ಅಂತಹ ದೃಶ್ಯಗಳಲ್ಲಿ ನಟಿಸಿದರೆ ಮನೆಯವರಿಗೂ ಮುಜುಗರ. ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅಷ್ಟೇ ಅಲ್ಲ, ಚುಂಬನದ ದೃಶ್ಯಗಳ ಕುರಿತು ನನ್ನ ಗಂಡನಿಗೆ ಉತ್ತರಿಸಬೇಕಾಗುತ್ತದೆ, ವಿವರಿಸಬೇಕಾಗುತ್ತದೆ. ಅಂತಹ ಅವಕಾಶಗಳಿಗೆ ಆಸ್ಪದ ನೀಡಬಾರದು. ಹಾಗಾಗಿ ಮದುವೆಯ ನಂತರ ನಾನು ಯಾವುದೇ ಚುಂಬನದ ದೃಶ್ಯಗಳಲ್ಲಿ ನಟಿಸಲಿಲ್ಲ" ಎಂದು ಪ್ರಿಯಾಮಣಿ ತಿಳಿಸಿದ್ದಾರೆ.