ಬೆಂಗಳೂರು: ನಟ ದರ್ಶನ್ ಜೈಲುಪಾಲಾದ ಬಳಿಕ ಕನ್ನಡ ಚಿತ್ರರಂಗದ ನಟ-ನಟಿಯರ ಒಂದೊಂದೇ ವಿವಾದಗಳು ಹೊರಬರುತ್ತಿದ್ದು, ಸ್ಯಾಂಡಲ್ವುಡ್ಗೆ ಇದು ಕಪ್ಪು ಚುಕ್ಕೆಯಾಗಿದೆ. ಇದೀಗ ಚೆಕ್ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ನ ಹಿರಿಯ ನಟಿ ಪದ್ಮಜಾ ರಾವ್ ಅವರಿಗೆ ನ್ಯಾಯಾಲಯವು 3 ತಿಂಗಳ ಸಜೆ ಹಾಗೂ 40 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ನಾಲ್ಕು ವರ್ಷಗಳ ಹಿಂದೆ ನಟಿ ಪದ್ಮಜಾ ರಾವ್ ಅವರ ಚೆಕ್ ಬೌನ್ಸ್ ಪ್ರಕರಣ ಭಾರೀ ಸುದ್ದಿಯಾಗಿತ್ತು. ಇದೀಗ ಈ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಸಿನಿಮಾ ಜೊತೆಗೆ ಸದ್ಯ ಕಿರುತೆರೆಯಲ್ಲೂ ಬಹುಬೇಡಿಕೆಯ ನಟಿಯಾಗಿರುವ ಪದ್ಮಜಾ ರಾವ್ ಅವರನ್ನು ದೋಷಿ ಎಂದು ತೀರ್ಪು ನೀಡಿರುವ ಮಂಗಳೂರಿನ ಎಂಟನೇ ಜೆಎಂಎಫ್‌ಸಿ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ನಟಿ ಪದ್ಮಜಾ ರಾವ್ 2020ರಲ್ಲಿ ತುಳು ಸಿನಿಮಾ ನಿರ್ದೇಶಕ, ವೀರೂ ಟಾಕೀಸ್ ಸಂಸ್ಥೆಯ ಮಾಲೀಕ ವೀರೇಂದ್ರ ಶೆಟ್ಟಿ ಕಾವೂರು ಅವರ ಬಳಿ ನಟಿ ಪದ್ಮಜಾ ರಾವ್ 40 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಭದ್ರತೆ ದೃಷ್ಟಿಯಿಂದ ಪದ್ಮಜಾ ರಾವ್ ಚೆಕ್ ನೀಡಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಪದ್ಮಜಾ ಅವರು ಹಣ ಪಾವತಿ ಮಾಡಿಲ್ಲ. ಹೀಗಾಗಿ, ವಿರೇಂದ್ರ ಶೆಟ್ಟಿ ಅವರು 2021ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಮೊದಲು ವಿಚಾರಣೆಗೆ ಹಾಜರಾದ ಪದ್ಮಜಾ ರಾವ್ ಅವರು ಬೇರೆಯದೇ ರೀತಿಯ ಹೇಳಿಕೆ ನೀಡಿದ್ದರು. ನಾನು ಸಾಲವನ್ನೇ ಪಡೆದಿಲ್ಲ ಎಂದಿದ್ದ ಅವರು, ಚೆಕ್ ನೀಡಿದ ವಿಚಾರವನ್ನೂ ಅಲ್ಲಗಳೆದಿದ್ದರು. ಜೊತೆಗೆ ಪದ್ಮಜಾ ರಾವ್ ಅವರ ಚೆಕ್ನ ಕದ್ದು ಸಹಿ ನಕಲು ಮಾಡಿದ ಆರೋಪವನ್ನು ಪದ್ಮಜಾ ರಾವ್ ಮಾಡಿದ್ದರು. ಆದರೆ, ಇದಕ್ಕೆ ಸಂಬಂಧಿಸಿ ಅವರು ಕೊರ್ಟ್ನಲ್ಲಿ ಸಾಕ್ಷಿಗಳನ್ನು ಒದಗಿಸಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ವೀರೇಂದ್ರ ಅವರ ಪರ ತೀರ್ಪು ನೀಡಿದ್ದು, 4.20 ಲಕ್ಷ ರೂ. ದಂಡವನ್ನು ವಿಧಿಸಿದೆ. ಇದರಲ್ಲಿ 40.17 ಲಕ್ಷ ರೂಪಾಯಿ ಹಣವನ್ನು ದೂರುದಾರನಿಗೆ ಕೊಡಬೇಕಿದೆ. ಉಳಿದ 3 ಸಾವಿರ ರೂಪಾಯಿ ಹಣವನ್ನು ಅವರು ಸರ್ಕಾರಕ್ಕ ಕಟ್ಟಬೇಕಿದೆ.
ಸದ್ಯ ಖಾಸಗಿ ವಾಹಿನಿಯ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಟಿಸುತ್ತಿರುವ ಪದ್ಮಜಾ ರಾವ್, ಜನ ಮೆಚ್ಚಿದ ಅತ್ತೆಯಾಗಿ ಕುಸುಮಾ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಈ ಧಾರಾವಾಹಿಯಲ್ಲಿ ಕುಸುಮಾ ಪಾತ್ರವೇ ಹೈಲೆಟ್ ಆಗಿದ್ದು, ಒಂದು ವೇಳೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಪದ್ಮಜಾ ರಾವ್ ಜೈಲು ಪಾಲಾದರೆ ಅವರ ನಟನೆಯ ಪ್ರಾಜೆಕ್ಟ್‌ಗಳ ಕಥೆಯೇನು ಎನ್ನುವುದು ಮುಂದಿರುವ ಪ್ರಶ್ನೆಯಾಗಿದೆ.