ಬೆಂಗಳೂರು: ನಟಿ ಲೈಲಾ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಸಮಯದಲ್ಲಿ ಲೈಲಾ ಅವರಿಗೆ ವಿಶೇಷವಾದ ಅನುಯಾಯಿಗಳಿದ್ದರು. ಎಲ್ಲಾ ಭಾಷೆಯ ಬಹುತೇಕ ಎಲ್ಲಾ ನಟರ ಜತೆ ಕೆಲಸ ಮಾಡಿರುವ ಲೈಲಾ ಚಿತ್ರರಂಗದಿಂದ ದೂರ ಉಳಿದಿದ್ದಾರೆ.
ನಟಿ ಲೈಲಾ ತಮಿಳು ಚಿತ್ರರಂಗದ ಪ್ರಮುಖ ನಟಿ. ಕೆಲವು ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದಲ್ಲಿ `ದೇವರ ಮಗ',`ರಾಮಕೃಷ್ಣ',`ತಂದೆಗೆ ತಕ್ಕ ಮಗ' ಚಿತ್ರಗಳಲ್ಲಿ ನಟಿಸಿದ್ದಾರೆ.
1996ರಲ್ಲಿ ಹಿಂದಿಯ 'ದುಶ್ಮನ್ ದುನಿಯಾ ಕಾ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಲೈಲಾ 2006ರವರೆಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. 'ನಂದ', 'ಪಿತಾಮಗನ್', 'ಪರ್ಥೆನ್ ರಸಿತೆನ್', 'ಧೀನಾ', 'ಧಿಲ್', 'ಅಲ್ಲಿ ತಂದ ವಾನಮ್', 'ಉನ್ನೈ ನಿನೈತು', 'ಉಲ್ಲಮ್ ಕೆತ್ಕುಮೆ', 'ಕಂದ ನಾಲ್ ಮುಧಲ್' ಸಿನಿಮಾಗಳು ಇವರಿಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿತ್ತು.
ಮುಂಬೈ ಮೂಲದ ಲೈಲಾ ತಂದೆ ಪೈಲೆಟ್ ಆಗಿದ್ದರು. ಹೀಗಾಗಿ ಅವರು ಮನೆಯಲ್ಲಿ ಇದ್ದದ್ದು ತುಂಬ ಕಡಿಮೆಯಂತೆ. ಬ್ಲೈಂಡ್ ಡೇಟ್ ವೇಳೆ ಮೆಹದಿಯನ್ನು ಲೈಲಾ ಮೀಟ್ ಆಗಿದ್ದರು. ಮದುವೆಗೂ ಮುನ್ನ 8 ವರ್ಷ ಈ ಜೋಡಿ ಡೇಟ್ ಮಾಡಿತ್ತು. 2006ರಲ್ಲಿ ಮೆಹದಿ ಹಾಗೂ ಲೈಲಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರ ನಿಶ್ಚಿತಾರ್ಥ ಆಗಿ 4 ವರ್ಷಗಳ ನಂತರ ಮದುವೆಯಾಗಿದ್ದಾರಂತೆ. ಮೆಹದಿ ಇರಾನಿ ಮೂಲದ ಉದ್ಯಮಿ. ಲೈಲಾ ಈಗ ಎರಡು ಗಂಡು ಮಕ್ಕಳ ತಾಯಿ. ಮದುವೆ ನಂತರ ಈಕೆ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಮದುವೆ ನಂತರ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಲೈಲಾ.
ಮದುವೆಯ ನಂತರ ಚಿತ್ರರಂಗವನ್ನು ತೊರೆದ ನಟಿ ಲೈಲಾ 16 ವರ್ಷಗಳ ನಂತರ 2022 ರಲ್ಲಿ ಬಿಡುಗಡೆಯಾದ ಸರ್ದಾರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಮರು ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ತಾಯಂದಿರ ದಿನದಂದು ಅನೇಕ ತಾರೆಯರು ತಮ್ಮ ತಾಯಿಯೊಂದಿಗೆ ಇರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಕೆಲವು ತಾರೆಯರು ತಮ್ಮ ಮಕ್ಕಳೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಲೈಲಾ ಕೂಡ ತಮ್ಮ ಕುಟುಂಬದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ತಾಯಂದಿರ ದಿನದಂದು ಲೈಲಾ ಅವರಿಗೆ ವಿಶ್ ಮಾಡಿ ಶೇರ್ ಮಾಡಿರುವ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಲೈಲಾಗೆ ಇಷ್ಟು ದೊಡ್ಡ ಮಕ್ಕಳಿದ್ದಾರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸಿನಿಮಾಗಳ ಹೊರತಾಗಿ, ಲೈಲಾ ದೂರದರ್ಶನದಲ್ಲಿ ಅನೇಕ ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಾರೆ. ರೋಮನ್ ಕ್ಯಾಥೋಲಿಕ್ ಆಗಿರುವ ಲೈಲಾ ಹಿಂದಿ, ಇಂಗ್ಲಿಷ್, ತೆಲುಗು, ಮಲಯಾಳಂ, ತಮಿಳು, ಫ್ರೆಂಚ್ ಭಾಷೆಗಳನ್ನು ಮಾತನಾಡುತ್ತಾರೆ.