ನ್ಯೂಸ್

ಅಕೌಂಟ್​ ಬ್ಯಾನ್​: ಟ್ವಿಟ್ಟರ್​ ವಿರುದ್ಧ ಗುಡುಗಿದ ಕಂಗನಾ ರಣಾವತ್

ಮುಂಬೈ: ದ್ವೇಷ ಬಿತ್ತುವ ಫೊಸ್ಟ್​ಗಳನ್ನು ಪದೇ ಪದೇ ಟ್ವಿಟ್ಟರ್​ನಲ್ಲಿ ಪ್ರಕಟಿಸುತ್ತಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಟ್ವಿಟ್ಟರ್​ ಖಾತೆಯನ್ನು ಟ್ವಿಟ್ಟರ್​ ಸಂಸ್ಥೆ ಮಂಗಳವಾರ ಶಾಶ್ವತವಾಗಿ ಸ್ಥಗಿತಗೊಳಿಸಿದೆ. ಇದರ ಬೆನ್ನಲ್ಲೇ ಕಂಗನಾ ಟ್ವಿಟ್ಟರ್​​ ಸಂಸ್ಥೆಗೆ ತಿರುಗೇಟು ನೀಡಿದ್ದಾರೆ.

'ಟ್ವಿಟ್ಟರ್​ ಅಮೆರಿಕ ಮೂಲದ್ದು. ಅಲ್ಲಿನ ಬಿಳಿಯರು, ಕಂದು ಬಣ್ಣದವರನ್ನು ಗುಲಾಮಗಿರಿಗೆ ಅರ್ಹರೆಂದುಕೊಂಡಿದ್ದಾರೆ. ನಾನು ಏನು ಮಾಡಬೇಕು, ಏನು ಮಾತನಾಡಬೇಕು ಎಂಬುದನ್ನು ಅವರು ನನಗೆ ಹೇಳಬೇಕಂತೆ, ಟ್ವಿಟ್ಟರ್​ನಿಂದ ತನ್ನನ್ನು ಬ್ಯಾನ್​ ಮಾಡಿರಬಹುದು. ಆದರೆ, ಅದೃಷ್ಟವಶಾತ್ ನನಗೆ ನನ್ನ ವಿಚಾರಧಾರೆಗಳನ್ನು ವ್ಯಕ್ತಪಡಿಸುವುದಕ್ಕೆ ಸಿನಿಮಾ ಸೇರಿದಂತೆ ಹಲವಾರು ವೇದಿಕೆಗಳಿವೆ. ನಾನಂತೂ ನನ್ನ ದೇಶದ ಜನರ ದ್ವನಿಯಾಗಿ ಇರುತ್ತೇನೆ. ಯಾರು ನನ್ನನ್ನು ತಡೆಯಲು ಸಾಧ್ಯವಿಲ್ಲ' ಎಂದು ಗುಡುಗಿದ್ದಾರೆ.

ಕಂಗನಾ ಅವರು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಟ್ವಿಟ್ಟರ್ ವಿರುದ್ಧ ತಮ್ಮ ಈ ಅಸಮಾಧಾನವನ್ನು ಬರೆದುಕೊಂಡಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶದ ನಂತರ ಅಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆ ಆಗುತ್ತಿದೆ. ಬೆಂಕಿ ಹಚ್ಚಲಾಗುತ್ತಿದೆ. ಇದನ್ನೆಲ್ಲಾ ಟಿಎಂಸಿ ಹಾಗೂ ಮಮತಾ ಮಾಡಿಸುತ್ತಿದ್ದಾರೆ ಎಂದು ಕಂಗನಾ ಟ್ವಿಟ್ಟರ್​ನಲ್ಲಿ ಸರಣಿ ಪೋಸ್ಟ್​​ಗಳನ್ನು ಹಾಕಿದ್ದರು. ಅಲ್ಲದೇ ಈ ಹಿಂದೆ ಕೂಡ ಅವರು ಹಲವಾರು ಬಾರಿ ಟ್ವಿಟ್ಟರ್​ನ ನಿಯಮಗಳನ್ನು ಉಲ್ಲಂಘನೆ ಮಾಡಿ ದ್ವೇಷ ಬಿತ್ತುವ ಪೋಸ್ಟ್​​ಗಳನ್ನು ಹಾಕಿದ್ದರು. ಅಲ್ಲದೇ ಈ ಹಿಂದೆ ಇದೇ ವಿಷಯವಾಗಿ ಕಂಗಾನಾಗೆ ಟ್ವಿಟ್ಟರ್​ ಎಚ್ಚರಿಕೆಯನ್ನೂ ನೀಡಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ವಿಟ್ಟರ್ ವಕ್ತಾರರು, ಕಂಗನಾ ಅವರು ನಮ್ಮ ಟ್ವಿಟ್ಟರ್​​ನ ನಿಯಮಗಳನ್ನು ಮೀರಿದ್ದು ಕಂಡು ಬಂದಿದ್ದರಿಂದ ಅವರ ಖಾತೆಯನ್ನು ಶಾಶ್ವತವಾಗಿ ಬ್ಯಾನ್​ ಮಾಡಿದ್ದೇವೆ. ನಮ್ಮ ಎಲ್ಲ ಟ್ವಿಟ್ಟರ್​ ಬಳಕೆದಾರರಿಗೆ ಎಲ್ಲ ನಿಯಮಗಳೂ ಒಂದೇ ಎಂದು ಹೇಳಿದ್ದಾರೆ.

ಇನ್ನು ಕಂಗನಾ ಅವರ ಟ್ವಿಟ್ಟರ್ ಖಾತೆ ಶಾಶ್ವತವಾಗಿ ಅಮಾನತಾಗಿರುವುದಕ್ಕೆ ಅವರು ಇಡೀ ದಿನ ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್ ಆಗಿದ್ಧಾರೆ. ಟ್ವಿಟ್ಟರ್​ನಲ್ಲಿ ಕಂಗನಾ 30 ಲಕ್ಷ ಫಾಲೋವರ್​ಗಳನ್ನು ಹೊಂದಿದ್ದರು.