ನ್ಯೂಸ್

ನಾನು ಗೆಲ್ಲಲು ಬಯಸುವೆ… ಕ್ಯಾನ್ಸರ್​ನಿಂದ ಬಳಲುತ್ತಿರುವ ನಟಿ ಹಿನಾ ಖಾನ್ ತಬ್ಬಿ, ಕಣ್ಣೀರಿಟ್ಟ ತಾಯಿ!

ನವದೆಹಲಿ: ಬಾಲಿವುಡ್‌ ಹಾಗೂ ಕಿರುತೆರೆ ನಟಿ ಹಿನಾ ಖಾನ್​ಗೆ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿದ್ದು, ಇದೀಗ ಕ್ಯಾನ್ಸರ್ 3ನೇ ಹಂತದಲ್ಲಿದೆ ಎಂದು ಸ್ವತಃ ನಟಿಯೇ ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಹಾಗೂ ಪ್ರೀತಿ ಪಾತ್ರರಿಗೆ ಅಚ್ಚರಿ ಮೂಡಿಸಿದ ಕಲಾವಿದೆ, ಸ್ತನ ಕ್ಯಾನ್ಸರ್​ ರೋಗದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಮುಂದಿನ ಚಿಕಿತ್ಸೆಯ ಸಲುವಾಗಿ ಮಹತ್ವದ ನಿರ್ಧಾರ ಕೈಗೊಂಡ ನಟಿ, ತಮ್ಮ ಕೇಶರಾಶಿಯನ್ನು ಕಳೆದುಕೊಳ್ಳುವ ಮೂಲಕ ಈ ಸವಾಲನ್ನು ಜಯಿಸುವುದಾಗಿ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

ಸ್ತನ ಕ್ಯಾನ್ಸರ್​ಗೆ ಈಗಾಗಲೇ ಚಿಕಿತ್ಸೆ ಪ್ರಾರಂಭವಾಗಿದೆ. ಈ ಹೋರಾಟದಲ್ಲಿ ತನ್ನ ತಾಯಿ ಜತೆಯಾಗಿರುವ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿರುವ ಹಿನಾ, ಕುಟುಂಬಸ್ಥರು, ಸ್ನೇಹಿತರು ಮತ್ತು ಆತ್ಮೀಯರು ನನ್ನ ಈ ಹೋರಾಟಕ್ಕೆ ದೊಡ್ಡ ಭರವಸೆ ಎಂದಿದ್ದಾರೆ. ನಾನು ಗೆಲುವನ್ನು ಆಯ್ಕೆ ಮಾಡುತ್ತೇನೆ ಎಂದ ನಟಿ, ಇಂದು ತಮ್ಮ ಕೂದಲನ್ನು ಕಟ್ ಮಾಡಿಸಿಕೊಳ್ಳುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕ್ಯಾನ್ಸರ್​ ವಿರುದ್ಧ ಹೋರಾಟ ನಡೆಸುತ್ತಿರುವ ಹಿನಾ, ತಮ್ಮ ಕೂದಲನ್ನು ಕೊಡುತ್ತಿದ್ದಂತೆ ಅವರ ತಾಯಿ ತಬ್ಬಿಕೊಂಡು, ಕಣ್ಣೀರಿಟ್ಟಿದ್ದಾರೆ. ಮಗಳ ಪರಿಸ್ಥಿತಿ ನೆನೆದು ನಟಿಯ ತಾಯಿ ಭಾವುಕರಾಗಿದ್ದಾರೆ. ಹಿನಾ ಖಾನ್​ ಅವರ ಧೈರ್ಯ, ದಿಟ್ಟ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಿಮ್ಮಂತೆ ಈ ಖಾಯಿಲೆ ವಿರುದ್ಧ ಸೆಣಸಾಡುತ್ತಿರುವವರಿಗೆ ನೀವು ಸ್ಪೂರ್ತಿಯಾಗಿದ್ದೀರಿ, ಒಳಿತಾಗಲಿ ಎಂದು ಶುಭಹಾರೈಸಿದ್ದಾರೆ. ಸದ್ಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ,(ಏಜೆನ್ಸೀಸ್).