ನ್ಯೂಸ್

ಸೌತ್​ನತ್ತ ದೀಪಿಕಾ ಪಡುಕೋಣೆ ಒಲವು; ತೆಲುಗು ಸ್ಟಾರ್ ನಟನ ಜತೆ ಕನ್ನಡತಿಯ ಸ್ಕ್ರೀನ್​ಶೇರ್​

ಬಾಲಿವುಡ್​ನಲ್ಲಿಯೇ ಸೆಟಲ್​ ಆಗಿರುವ ಕನ್ನಡತಿ ದೀಪಿಕಾ ಪಡುಕೋಣೆ, ಸದ್ಯ ಟಾಪ್​ ನಟಿಯರ ಪಟ್ಟಿಯಲ್ಲಿ ಟಾಪ್​ನಲ್ಲಿಯೇ ಇದ್ದಾರೆ. ನಟನೆ, ನಿಮರ್ಣ, ಜಾಹೀರಾತು ಹೀಗೆ ಬಂದಿಲ್ಲೊಂದು ಕ್ಷೇತ್ರದಲ್ಲಿ ಪಾರಮ್ಯ ಮೆರೆಯುತ್ತಿದ್ದಾರೆ. ಆರಂಭದಲ್ಲಿ ಕನ್ನಡದ ಐಶ್ವರ್ಯಾ ಸಿನಿಮಾ ಮೂಲಕ ಕರಿಯರ್ ಆರಂಭಿಸಿದ್ದರಾದರೂ, ಸಕ್ಸಸ್​ ಸಿಕ್ಕ ಬಳಿಕ ಸೌತ್​ ಕಡೆ ಮುಖ ಮಾಡಿರಲಿಲ್ಲ ಈ ಪಡುಕೋಣೆ ಸುಂದರಿ. ಇದೀಗ ಆ ಸವಿ ಗಳಿಗೆಗೆ ಕಾಲ ಕೂಡಿಬಂದಿದೆ.

ಹೌದು, ದೀಪಿಕಾ ಪಡುಕೋಣೆ ದಶಕದ ಬಳಿಕ ಸೌತ್​ ಸಿನಿಮಾ ಇಂಡಸ್ಟ್ರಿಯತ್ತ ಹೊರಳಿದ್ದಾರೆ. ಬಹುಭಾಷೆಗಳಲ್ಲಿ ಸಿದ್ಧವಾಗುತ್ತಿರುವ ಚಿತ್ರಕ್ಕೆ ನಾಯಕಿಯಾಗಿ ದೀಪಿಕಾ ಆಯ್ಕೆಯಾಗಿದ್ದಾರೆ. ಬಾಹುಬಲಿ ಮೂಲಕ ಪ್ಯಾನ್​ ಇಂಡಿಯಾ ಸೆನ್ಸೆಷನ್​ ಸೃಷ್ಟಿಸಿದ್ದ ನಟ ಪ್ರಭಾಸ್​ ಮುಂದಿನ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ದೀಪಿಕಾ ನಟಿಸುವುದು ಅಧಿಕೃತವಾಗಿದ್ದು, ಸ್ವತಃ ಚಿತ್ರತಂಡವೇ ಈ ಸುದ್ದಿಯನ್ನು ಹೊರಹಾಕಿದೆ.

ಅಂದಹಾಗೆ, ನಾಗ್​ ಅಶ್ವಿನ್​ ನಿರ್ದೇಶನದಲ್ಲಿ ಸಿದ್ಧವಾಗಲಿರುವ ಈ ಬಿಗ್​ ಬಜೆಟ್​ ಚಿತ್ರದ ಭಾಗವಾಗಿರುವುದಕ್ಕೆ ದೀಪಿಕಾ ಸಹ ಥ್ರಿಲ್​ ಆಗಿದ್ದಾರೆ. ನಿರೀಕ್ಷೆ ಮಟ್ಟ ಮೀರಿ ಈ ಸಿನಿಮಾ ಮೂಡಿಬರುವ ಸಾಧ್ಯತೆ ಕಾಣುತ್ತಿದೆ. ಅಷ್ಟೇ ಥ್ರಿಲ್​ ಆಗಿದ್ದೇನೆ ಎಂದೂ ದೀಪಿಕಾ ಪುಟಾಣಿ ಥೀಮ್​ ವಿಡಿಯೋ ತುಣುಕೊಂದನ್ನು ಶೇರ್​ ಮಾಡಿಕೊಂಡು, ದಕ್ಷಿಣದತ್ತ ಬರುತ್ತಿರುವುದಕ್ಕೆ ಕಾತರರಾಗಿದ್ದಾರೆ.

ಇ ಬಿಗ್​ ಸಿನಿಮಾವನ್ನು ವೈಜಯಂತಿ ಸಿನಿಮಾಸ್ ಸಂಸ್ಥೆ ನಿರ್ಮಾಣ ಮಾಡಲಿದ್ದು, ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ಇದೂ ಒಂದಾಗಿದೆ. ಇದೇ ಸಂಸ್ಥೆ 50ನೇ ವಾರ್ಷಿಕೋತ್ಸವದ ಆಚರಣೆಯಲ್ಲಿದ್ದು, ಆ ಸಂಭ್ರಮಕ್ಕೆ ಈ ಸಿನಿಮಾ ಘೋಷಣೆ ಮಾಡಿದ್ದು, ದೀಪಿಕಾ ಅವರನ್ನು ಕರೆತಂದಿದೆ. ಮಹಾನಟಿ ಸಿನಿಮಾ ನಿರ್ದೇಶನ ಮಾಡಿದ್ದ ನಿದೇಶಕ ನಾಗ್​ ಅಶ್ವಿನ್​ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. (ಏಜೆನ್ಸೀಸ್​)