ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಟಿ, ಬಿಗ್ಬಾಸ್ ಸೀಸನ್-10ರ ಸ್ಪರ್ಧಿ ಸಿರಿ ಅವರ ಮದುವೆ ಯಾವಾಗ ಎಂಬ ಪ್ರಶ್ನೆ ಆಗಿಂದಾಗೆ ಕಾರ್ಯಕ್ರಮಗಳಲ್ಲಿ ಕೇಳಿ ಬರುತ್ತಿತ್ತು. ಈ ಬಗ್ಗೆ ನಟಿ ಸಿರಿ ಅಷ್ಟಾಗಿ ಮಾತನಾಡಲು ಹೋಗಿರಲಿಲ್ಲ. ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ನಟಿ ಸಿರಿ ಅತಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಉದ್ಯಮಿ ಪ್ರಭಾಕರ್ ಬೋರೇಗೌಡ ಎಂಬುವವರ ಜೊತೆ ಸಿರಿ ಸಪ್ತಪದಿ ತುಳಿದಿದ್ದಾರೆ. ಮಂಡ್ಯ ಮೂಲದವರಾದ ಪ್ರಭಾಕರ್ ಬೆಂಗಳೂರಿನಲ್ಲಿ ಕುಟುಂಬಸ್ಥರೊಂದಿಗೆ ನೆಲೆಸಿದ್ದಾರೆ. ಚಿಕ್ಕಬಳ್ಳಾರಪುರ ಬಳಿ ಇರುವ ಭೋಗ ನಂದೀಶ್ವರ ದೇವಾಲಯದಲ್ಲಿ ಮದುವೆ ನೆರೆವೇರಿದ್ದು, ಕುಟುಂಬಸ್ಥರು ಸೇರಿದಂತೆ ಕೆಲವೇ ಕೆಲವು ಆಪ್ತರು ಭಾಗಿಯಾಗಿದ್ದಾರೆ. ಆದರೆ, ಮದುವೆ ಆಗಿರುವ ಬಗ್ಗೆ ನಟಿ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ಸಿರಿ ಅವರಿಗೆ ಮೈತುಂಬ ಅರಿಷಿಣ ಹಚ್ಚಿರುವ ವಿಡಿಯೋ ವೈರಲ್ ಆಗಿತ್ತು. ಇದು ಸಿನಿಮಾ ಅಥವಾ ಧಾರಾವಾಹಿ ಶೂಟಿಂಗ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸಿರಿ ಅವರು ರಿಯಲ್ ಲೈಫ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಹಲವರಿಗೆ ಅಚ್ಚರಿಯನ್ನುಂಟು ಮಾಡಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದ್ದು, ಜೂನ್ 13ರಂದು ಸರಳವಾಗಿ ಮದುವೆ ನಡೆದಿದೆ. ಸದ್ಯ ನಟಿಯ ಮದುವೆ ಸುದ್ದಿ ಕೇಳಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಕೋರುತ್ತಿದ್ದಾರೆ.
ಸಿರಿ ಅವರಿಗೆ ಈಗ 40 ವರ್ಷ ವಯಸ್ಸು ಎನ್ನಲಾಗಿದೆ. ಬಿಗ್ಬಾಸ್ನಲ್ಲಿ ಒಮ್ಮೆ ಮದುವೆ ಬಗ್ಗೆ ಕೇಳಿದಾಗ ಸಿರಿ ಅವರು ಇಷ್ಟುದಿನಗಳ ಕಾಲ ಯೋಗ್ಯ ಹುಡುಗ ಸಿಕ್ಕಿಲ್ಲ, ಮದುವೆ ಅವಶ್ಯಕತೆ ಇದೆಯಾ ಎಂಬ ಪ್ರಶ್ನೆ ಎದುರಾಗಿತ್ತು. ಹೀಗಾಗಿ ಮದುವೆ ಆಗಿಲ್ಲ. ಮದುವೆ ಆಗಬೇಕು ಅಂತ ಆಗೋದು, ಆಮೇಲೆ ಸಮಸ್ಯೆ ಮಾಡ್ಕೊಳ್ಳೋದು ಇಷ್ಟ ಆಗಲ್ಲ. ಇದರಿಂದ ನನಗೂ ಸಮಸ್ಯೆ ಆಗುತ್ತದೆ, ಬೇರೆಯವರಿಗೂ ಸಮಸ್ಯೆ. ಸುಮ್ಮನೆ ನನ್ನ, ಬೇರೆಯವರ ಜೀವನ ಹಾಳುಮಾಡಿಕೊಳ್ಳೋದು ಯಾಕೆ ಅಂತ ಸುಮ್ಮನಿದ್ದೆ. ನಾನು ಮದುವೆ ಆಗೋಕೆ ರೆಡಿ ಆಗಿರುವೆ, ಆದರೆ ಸರಿಯಾದ ಜೀವನ ಸಂಗತಿ ಸಿಗಬೇಕು. ಕಾಂಪ್ರಮೈಸ್ ಆಗಲೇಬೇಕು. ನಾನು ಕಾಂಪ್ರಮೈಸ್ ಆಗಲು ರೆಡಿ ಎಂದಿದ್ದರು.
ನನಗೆ ತಂದೆಯಿಲ್ಲ. ತಾಯಿಗೆ ನಾವಿಬ್ಬರು ಹೆಣ್ಣು ಮಕ್ಕಳು. ನಮ್ಮ ಮನೆಗೆ ಈಗ ಅಳಿಯನೂ ಬೇಕು, ಮಗನೂ ಬೇಕು. ಅಕ್ಕನ ಗಂಡ ಕೂಡ ತೀರಿಕೊಂಡಿದ್ದಾರೆ. ಒಮ್ಮೊಮ್ಮೆ ನನಗೆ ಮದುವೆ ಬೇಕಾ? ಅದರ ಅಗತ್ಯ ಇದೆಯಾ ಅಂತ ಅನಿಸುತ್ತದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಹುಡುಗ ಸಿಕ್ಕರೆ ನೋಡೋಣ ಎಂದು ಬಿಗ್ಬಾಸ್ನಲ್ಲಿ ಹೇಳಿದ್ದರು.