ನ್ಯೂಸ್

'ಗಡಿಬಿಡಿ ಕೃಷ್ಣ' ಖ್ಯಾತಿಯ ಭಾಗ್ಯಶ್ರೀಗೆ ಗಂಭೀರ ಗಾಯ; ಅಷ್ಟಕ್ಕೂ ನಟಿಗೆ ಆಗಿದ್ದಾದರೂ ಏನು? ಇಲ್ಲಿದೆ ಮಾಹಿತಿ

ಮುಂಬೈ: ತಮ್ಮ ನಟನೆ ಮೂಲಕವೇ 90ರ ದಶಕದಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಚೆಲುವೆ ಭಾಗ್ಯಶ್ರೀ (Bhagyashree) ಸದ್ಯ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದು, ಅಲ್ಲೊಂದು ಇಲ್ಲೊಂದು ಸಿನಿಮಾಗಳನ್ನು ಮಾತ್ರ ಮಾಡುತ್ತಿದ್ದಾರೆ. 1998ರಲ್ಲಿ ಬಿಡುಗಡೆಯಾದ ಗಡಿಬಿಡಿ ಕೃಷ್ಣ ಚಿತ್ರದಲ್ಲಿ ಶಿವರಾಜ್​ಕುಮಾರ್​ಗೆ ಜೋಡಿಯಾಗಿದ್ದ ಈ ನಟಿ ಸಲ್ಮಾನ್ ಖಾನ್ ಸೇರಿದಂತೆ ಹಲವರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇದೀಗ ನಟಿ ಭಾಗ್ಯಶ್ರೀ ಅವರು ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ವೈರಲ್ ಭಯಾನಿ ಇನ್ಸ್​ಟಾ ಖಾತೆಯಲ್ಲಿ ಭಾಗ್ಯಶ್ರೀ (Bhagyashree) ಅವರು ಆಸ್ಪತ್ರೆಯಲ್ಲಿ ಮಲಗಿರುವ ಫೋಟೋವೊಂದನ್ನು ಪೋಸ್ಟ್ ಮಾಡಲಾಗಿದ್ದು, ಇದರಲ್ಲಿ ನಟಿ ಭಾಗ್ಯಶ್ರೀ ಅವರ ಹಣೆಯ ಭಾಗಕ್ಕೆ ಗಂಭೀರ ಗಾಯವಾಗಿರುವುದನ್ನು ನೋಡಬಹುದಾಗಿದೆ. ಅವರ ಹಣೆಗೆ 13 ಹೊಲಿಗೆ ಹಾಕಲಾಗಿದೆ ಎಂದು ಹೇಳಲಾಗಿದ್ದು, ಅವರ ಆರೋಗ್ಯದ ಕುರಿತು ಇನ್ನಷ್ಟೇ ತಿಳಿದು ಬರಬೇಕಿದೆ.

ಪಿಕಲ್​ಬಾಲ್ ಆಟದಲ್ಲಿ ನಟಿ ಭಾಗ್ಯಶ್ರೀ (Bhagyashree) ಅವರು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಅಟವಾಡುವಾಗ ಗಾಯಗೊಂಡಿರಬಹುದು ಎಂದು ಹೇಳಲಾಗಿದೆ. ಸದ್ಯ ಭಾಗ್ಯಶ್ರೀ ಅವರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದ್ದು, ವೈದ್ಯರು 13 ಹೊಲಿಗೆಗಳನ್ನು ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಆಪರೇಷನ್ ಬಳಿಕ ಅವರು ಚೇರತರಿಸಿಕೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿದ್ದು, ಅಭಿಮಾನಿಗಳು ನಟಿಯ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದಾರೆ.

ಕನ್ನಡದಲ್ಲಿ ಅಮ್ಮಾವ್ರ ಗಂಡ, ಗಡಿಬಿಡಿ ಕೃಷ್ಣ, ಗಂಡುಗಲಿ ಕುಮಾರರಾಮ, ಮೇಕ್​ಅಪ್​, ಅನುರಾಗ ಸಂಗಮ, ಸೀತಾರಾಮ ಕಲ್ಯಾಣ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ಬೆಂಗಾಲಿ, ಭೋಜ್​ಪುರಿ, ಮರಾಠಿ ಮುಂತಾದ ಭಾಷೆಯ ಸಿನಿಮಾಗಳಲ್ಲಿ ಕೂಡ ಭಾಗ್ಯಶ್ರೀ ನಟಿಸಿ ಹೆಚ್ಚು ಖ್ಯಾತಿ ಗಳಿಸಿದ್ದಾರೆ.