ನ್ಯೂಸ್

'ಪ್ಲಾಸ್ಟಿಕ್​ ಸರ್ಜರಿಯಿಂದ ಮುಖಹಾಳು, ಬೇಕಿತ್ತಾ'? ತನ್ನನ್ನು ಅಪಹಾಸ್ಯ ಮಾಡಿದವರಿಗೆ ನಟಿ ಆಯೇಶಾ ಕೊಟ್ಟ ಖಡಕ್ ಉತ್ತರವಿದು!

ಮುಂಬೈ: 'ತಾರ್ಜನ್​ ದಿ ವಂಡರ್​ ಕಾರು' ಸಿನಿಮಾ ಮೂಲಕ ಬಾಲಿವುಡ್​ ಮಂದಿ ಹೃದಯಗೆದ್ದ ನಟಿ ಆಯೇಶಾ ಟಾಕಿಯಾ ಶುಕ್ರವಾರ (ಫೆ.16) ತಮ್ಮ ಮಗನೊಂದಿಗೆ ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡರು. ಸ್ಥಳದಲ್ಲಿದ್ದ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾದ ನಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆದವು. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಆಯೇಶಾ ಹಿಂದಿನ ಮತ್ತು ಪ್ರಸ್ತುತ ಮುಖವನ್ನು ಹೋಲಿಸಿ ಭಾರೀ ಟ್ರೋಲ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದ ಪ್ಲಾಟ್​ಫಾರ್ಮ್​ಗಳಲ್ಲಿ ತನ್ನ ಮುಖವನ್ನು ಹೋಲಿಕೆ ಮಾಡಿ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಏನೆಲ್ಲಾ ಮಾಡಿಕೊಂಡಿದ್ದೀರಾ, ಇವೆಲ್ಲಾ ಬೇಕಿತ್ತಾ? ಪ್ಲಾಸ್ಟಿಕ್ ಸರ್ಜರಿಯಿಂದ ಮುಖ ಹಾಳುಮಾಡಿಕೊಂಡ ನಟಿ ಎಂದು ನೆಟ್ಟಿಗರು ಮಾಡಿದ ವ್ಯಾಪಕ ಟ್ರೋಲ್​ಗಳನ್ನು ಗಮನಿಸಿದ ಆಯೇಶಾ,'ನೀವು ಏನು ಬೇಕಾದರೂ ಮಾಡಿ'... ಎಂದು ಪ್ರತಿಕ್ರಿಯಿಸುವುದರ ಜತೆಗೆ ಚಿಕ್ಕ ಸಾಲುಗಳ ಪೋಸ್ಟ್​ವೊಂದನ್ನು ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

"ಜನರು ನಿಮ್ಮ ಶಕ್ತಿಯನ್ನು ಹೇಗೆ ಗ್ರಹಿಸುತ್ತಾರೆ ಎಂಬುದನ್ನು ನೀವು ತಡೆಯಲು ಆಗುವುದಿಲ್ಲ. ನೀವು ಮಾಡುವ ಅಥವಾ ಹೇಳುವ ಯಾವುದಾದರೂ ವಿಷಯ ಅವರು ನೋಡುವ ದೃಷ್ಟಿಯಲ್ಲಿ ಫಿಲ್ಟರ್ ಆಗಿರುತ್ತದೆ. ಅದು ಸಂಪೂರ್ಣವಾಗಿ ನಿಮ್ಮ ಬಗ್ಗೆ ಅಲ್ಲ. ನಿಮ್ಮ ಕೆಲಸವನ್ನು ಸಾಧ್ಯವಾದಷ್ಟು ಪ್ರಾಮಾಣಿಕತೆ ಮತ್ತು ಪ್ರೀತಿಯಿಂದ ಮಾಡುವುದನ್ನು ಮುಂದುವರಿಸಿ" ಎಂದಿದ್ದಾರೆ.

ಮತ್ತೊಂದು ಪೋಸ್ಟ್​ನಲ್ಲಿ ತನ್ನ ಫೋಟೋ ಪೋಸ್ಟ್​ ಮಾಡಿದ ಆಯೇಶಾ, ಅದಕ್ಕೆ "ಪ್ರೀತಿ ಮತ್ತು ಶಾಂತಿ" ಎಂಬ ಶೀರ್ಷಿಕೆ ಕೊಟ್ಟು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).