Special Songs: ಒಂದು ಸಿನಿಮಾ ಅಂದಮೇಲೆ ಅದರಲ್ಲಿ ಸಾಹಸ, ಪ್ರೇಮ, ಭಾವುಕ, ಹಾಡಿನ ದೃಶ್ಯಗಳು ಒಳಗೊಂಡಿರುತ್ತವೆ. ಅದರಲ್ಲೂ ವಿಶೇಷ ಎಂದರೆ ಈ ಐಟಂ ಹಾಡುಗಳು. ಎಲ್ಲಾ ಚಿತ್ರಗಳಲ್ಲಿಯೂ ಇದೇ ಇರಲಿದೆ ಎಂದು ಹೇಳಲು ಸಾಧ್ಯವಿಲ್ಲ. ಕಾರಣ, ಆಯಾ ಚಿತ್ರದ ಕಥಾಹಂದರ ಮತ್ತು ನಟನ ಜಾನರ್ ಮೇಲೆ ವಿಶೇಷ ಹಾಡುಗಳ ಅಗತ್ಯತೆ ಹೆಚ್ಚಿರಲಿದೆ. ಐಟಂ ಸಾಂಗ್ಗಳಿಗೆ ಹುಚ್ಚೆದ್ದು ಕುಣಿಯುವ ಸಿನಿಪ್ರಿಯರು, ಇಂತಹ ಹಾಡುಗಳನ್ನು ಕೆಲವೊಮ್ಮೆ ಕಲಿತು, ಪಾರ್ಟಿಗಳಲ್ಲಿ ಕೇಳುತ ಆನಂದಿಸುವ ಸನ್ನಿವೇಶಗಳೂ ಉಂಟು.
ಇದನ್ನೂ ಓದಿ: ‘ಪಾಕಿಸ್ತಾನಿಗಳು ಮತ್ತು ಹಂದಿಗಳಿಗೆ ಇಲ್ಲಿ ಅವಕಾಶವಿಲ್ಲ’! ಅಂಗಡಿಯ ಹೊರಗಿನ ಈ ಪೋಸ್ಟರ್ ವೈರಲ್..Pakistan
30ರ ದಶಕದ ಟಾಕಿ ದಿನಗಳಿಂದಲೂ ಇಂತಹ ವಿಶೇಷ ಹಾಡುಗಳ ಸಂಖ್ಯೆಗಳು ಭಾರತೀಯ ಚಿತ್ರರಂಗದ ಭಾಗವಾಗಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ, ಈ ಐಟಂ ಹಾಡುಗಳು ಚಲನಚಿತ್ರಗಳ ಯಶಸ್ಸಿಗೆ ಬಹಳ ನಿರ್ಣಾಯಕವಾಗಿವೆ ಎಂಬುದು ಗಮನಾರ್ಹ. ಐಟಂ ಸಾಂಗ್ಗಳಿಂದಲೇ ಸಿನಿಮಾಗೆ ಬರುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ. ಇಂತಹ ಹಾಡುಗಳಿಗೆ ಎಷ್ಟು ಡಿಮಾಂಡ್ ಇದೆಯೋ ಅಷ್ಟೇ ಆ ಹಾಡಿನಲ್ಲಿ ಮೈಚಳಿ ಬಿಟ್ಟು ಕುಣಿಯುವ ನಟಿಮಣಿಯರಿಗೂ ಇದೆ.
ಬಾಲಿವುಡ್‌ನ ನಟಿ ನೋರಾ ಫತೇಹಿ ಒಂದು ಹಾಡಿಗೆ 2 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ. ಅವರಂತೆಯೇ ಸನ್ನಿ ಲಿಯೋನ್ ಕೂಡ ಅಷ್ಟೇ ಮೊತ್ತವನ್ನು ಪಡೆಯುತ್ತಾರೆ. ತಾವು ಕುಣಿದು ಕುಪ್ಪಳಿಸಿದ ಹಾಡು ಹಿಟ್ ಆದರೆ ಮುಗಿಯಿತು ಮುಂದಿನ ಪ್ರಾಜೆಕ್ಟ್ಗಳಲ್ಲಿ ನಟಿಯರು ಹೆಚ್ಚಿನ ಸಂಭಾವನೆಗೆ ಬೇಡಿಕೆ ಇಡುತ್ತಾರೆ ಎಂದು ವರದಿಗಳು ಉಲ್ಲೇಖಿಸಿವೆ. ಕರೀನಾ ಕಪೂರ್ ಒಂದು ಐಟಂ ಹಾಡಿಗೆ 1.5 ಕೋಟಿ ರೂ.ಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಕತ್ರಿನಾ ಕೈಫ್ 2 ಕೋಟಿ ರೂ.ಗಿಂತ ಅಧಿಕ ಹಣ ಸ್ವೀಕರಿಸುತ್ತಾರೆ.
ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾದ ಜಾಕ್ವೆಲಿನ್ ಫರ್ನಾಂಡಿಸ್ ಒಂದು ಹಾಡಿಗೆ 3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. 'ದಾಬಿಡಿ ದಿಬಿಡಿ ಭಾಮಾ' ಉರ್ವಶಿ ರೌಟೆಲಾ ಕೂಡ 3 ಕೋಟಿ ರೂ. ಪಡೆದಿದ್ದಾರೆ. ಈಗ ತಮ್ಮ ಮುಂದಿನ ಹಾಡಿಗೆ ಅವರು ಇದಕ್ಕಿಂತ ದುಬಾರಿ ಮೊತ್ತದ ಹಣ ಕೇಳುತ್ತಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ನಟಿ ತಮನ್ನಾ ಭಾಟಿಯಾ, ಜಾನ್ವಿ ಕಪೂರ್, ಪೂಜಾ ಹೆಗ್ಡೆ, ತಾಪ್ಸಿ ಪನ್ನು ಸೇರಿದಂತೆ ಹಲವರು ವಿಶೇಷ ಹಾಡಿನ ಭಾಗವಾಗಲು ಬೇಡಿಕೆಯಲ್ಲಿದ್ದಾರೆ.
ಐಟಂ ಸಾಂಗ್ ಸಂಭಾವನೆ ವಿಚಾರದಲ್ಲಿ 'ಪುಷ್ಪ ದಿ ರೈಸ್' ಚಿತ್ರದ 'ಊ ಅಂಟವಾ' ಹಾಡಿಗೆ ನಟಿ ಸಮಂತಾ ಬರೋಬ್ಬರಿ 5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಅಸಲಿಗೆ ಸಿನಿಮಾ ಪೂರ ನಟಿಸಿದ ನಾಯಕಿ ರಶ್ಮಿಕಾ ಮಂದಣ್ಣ ಅವರ ಸಂಭಾವನೆಗಿಂತ ಸಮಂತಾ ಪಡೆದ ಮೊತ್ತ ದುಬಾರಿಯಾಗಿದೆ. ಪುಷ್ಪ ಚಿತ್ರದಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಇಡೀ ಚಿತ್ರಕ್ಕೆ 2 ಕೋಟಿ ರೂ. ಪಡೆದರೆ, ಸಮಂತಾ ಕೇವಲ ಒಂದು ಹಾಡಿಗೆ 5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಈ ಸಂಗತಿ ಹಲವರ ಹುಬ್ಬೇರಿಸಿದೆ ಎಂದೇ ಹೇಳಬಹುದು.
ಇನ್ನು ರಜನಿಕಾಂತ್ ಅವರ 'ಜೈಲರ್' ಚಿತ್ರದಲ್ಲಿ 'ನಾ ಕಾವಾಲಯ್ಯ' ಹಾಡಿಗೆ 3 ಕೋಟಿ ರೂ. ಪಡೆದು ಮಿಂಚಿದ್ದ ತಮನ್ನಾ ಭಾಟಿಯಾ, ಜಾಲತಾಣಗಳಲ್ಲಿ ಇದೊಂದು ಹಾಡಿನಿಂದಲೇ ಭಾರೀ ಜನಪ್ರಿಯತೆ ಗಳಿಸಿದರು. ಅದಾದ ನಂತರ, ಬಾಲಿವುಡ್‌ನ 'ಸ್ತ್ರೀ 2' ಚಿತ್ರದಲ್ಲಿ ಈ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು. ಅದಕ್ಕೆ ಕಾರಣ 'ಆಜ್ ಕಿ ರಾತ್...' ಸೂಪರ್ಹಿಟ್ ಹಾಡಾಯಿತು. ಇದರೊಟ್ಟಿಗೆ 'ರೈಡ್ 2' ಸಿನಿಮಾದ ಐಟಂ ಹಾಡಿಗೂ ಸಖತ್ ಹೆಜ್ಜೆ ಹಾಕಿರುವ ತಮನ್ನಾ, ಇದೊಂದು ಹಾಡಿಗೆ ಬರೋಬ್ಬರಿ 5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಐಟಂ ಹಾಡುಗಳಲ್ಲಿ ಮಿಂಚುತ್ತಿರುವ ಹಾಗೂ ಮುಂಚೂಣಿಯಲ್ಲಿರುವ ಕಲಾವಿದೆ ಎಂದರೆ ಅದು ತಮನ್ನಾ ಭಾಟಿಯಾ,(ಏಜೆನ್ಸೀಸ್).