ಮುಂಬೈ: (Delhi explosion) ನವೆಂಬರ್ 10 ರ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ಕಾರ್ ಬಾಂಬ್ ಸ್ಫೋಟಗೊಂಡಿತು. ಸ್ಫೋಟದಲ್ಲಿ ಎಂಟು ಜನರು ಪ್ರಾಣ ಕಳೆದುಕೊಂಡರು. ಬಾಲಿವುಡ್ ನಟ ಹಾಗೂ ನಟಿಯರೂ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿ X ನಲ್ಲಿ ಘಟನೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ.
ಸೋನು ಸೂದ್ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡಿದ್ದಾರೆ. "ಇಂದು ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟದಿಂದ ಬಾಧಿತರಾದ ಎಲ್ಲರಿಗೂ ನನ್ನ ಹೃದಯ ಮಿಡಿಯುತ್ತದೆ. ಬಲಿಪಶುಗಳನ್ನು ಬೆಂಬಲಿಸೋಣ, ಪರಸ್ಪರ ಕಾಳಜಿ ವಹಿಸೋಣ ಮತ್ತು ಶಾಂತಿಗೆ ಬದ್ಧರಾಗಿರೋಣ" ಎಂದು ಅವರು ಬರೆದಿದ್ದಾರೆ.
ದೆಹಲಿಯ ಕೆಂಪು ಕೋಟೆ ಬಳಿ ಇಂದು ನಡೆದ ದುರಂತ ಸ್ಫೋಟದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ಸಂತಾಪಗಳು. ಭಯಾನಕ ಸುದ್ದಿ ಎಂದು ರವೀನಾ X ನಲ್ಲಿ ಬರೆದಿದ್ದಾರೆ.
ನಟ ವಿಜಯ್ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ದೆಹಲಿಯ ಕೆಂಪು ಕೋಟೆ ಮೆಟ್ರೋ ಬಳಿ ಕಾರು ಸ್ಫೋಟ ಸಂಭವಿಸಿ ಅಮೂಲ್ಯ ಜೀವಗಳನ್ನು ಬಲಿ ಪಡೆದ ಸುದ್ದಿಯಿಂದ ತೀವ್ರ ಆಘಾತ ಮತ್ತು ದುಃಖವಾಗಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇನೆಂದು ಬರೆದಿದ್ದಾರೆ.
ಕೆಂಪುಕೋಟೆಯ ಮೆಟ್ರೋ ಸ್ಟೇಷನ್ ಬಳಿ ಇಂದು(ನ. 10) ಸಂಜೆ 6.30ರ ಸುಮಾರಿಗೆ ಕಾರೊಂದು ಸ್ಫೋಟಗೊಂಡಿದ್ದು, ಪಕ್ಕದಲ್ಲಿ 7ರಿಂದ 8 ಕಾರುಗಳು ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, ಸುಮಾರು ಜನ ಗಾಯಗೊಂಡಿದ್ದಾರೆ. ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ನಂತರ ಪಕ್ಕದಲ್ಲಿದ್ದ 7 ರಿಂದ 8 ವಾಹನಗಳು ಸಹ ಬೆಂಕಿಗೆ ಆಹುತಿಯಾಗಿ ಹಾನಿಯಾಗಿವೆ.
ತಕ್ಷಣ ಸ್ಥಳಕ್ಕೆ ಸುಮಾರು 20 ಅಗ್ನಿಶಾಮಕದಳ ವಾಹನಗಳು ಧಾವಿಸಿ ಬೆಂಕಿಯನ್ನು ನಂದಿಸಿವೆ. ಗಾಯಾಳುಗಳಮನ್ನು ಹತ್ತಿರದ ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿ ಪೊಲೀಸರ ವಿಶೇಷ ದಳವು ಘಟನಾ ಸ್ಥಳಕ್ಕೆ ತಲುಪಿದ್ದು ಪರಿಶೀಲಿಸುತ್ತಿದ್ದಾರೆ.