ನ್ಯೂಸ್

ಅನಂತ್​ ಅಂಬಾನಿ ಮದುವೆಯಲ್ಲಿ ನಟ ಯಶ್​ ಭಾಗಿ; ಗಮನ ಸೆಳೆಯುತ್ತಿದೆ ರಾಕಿ ಭಾಯ್​ ಹೊಸ ಲುಕ್​

ಮುಂಬೈ: ಮುಕೇಶ್​ ಅಂಬಾನಿ-ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ವಿವಾಹ ಸಮಾರಂಭವು ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್​​ ಕನ್ವೆಂಷನ್​ ಸೆಂಟರ್​ನಲ್ಲಿ ನಡೆಯಲಿದ್ದು, ವಿವಾಹ ಮಹೋತ್ಸವು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಮದುವೆ ಕಾರ್ಯಕ್ರಮಕ್ಕೆ ಪ್ಯಾನ್​ ಇಂಡಿಯಾ ನಟ ಯಶ್​ರನ್ನು ಆಹ್ವಾನಿಸಲಾಗಿದ್ದು, ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಮದುವೆಯಲ್ಲಿ ಪಾಲ್ಗೊಳ್ಳಲು ಪತ್ನಿ ರಾಧಿಕಾ ಜೊತೆ ಯಶ್​ ಮುಂಬೈಗೆ ಬಂದು ಇಳಿದಿದ್ದಾರೆ. ಈ ವೇಳೆ ಅವರ ಟಾಕ್ಸಿಕ್​ ಚಿತ್ರದ ಲುಕ್​ ರಿವೀಲ್​ ಆಗಿದೆ.

ಕೆಜಿಎಫ್​-2 ಬಳಿಕ ನಟ ಯಶ್ ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್ ಅವರ​ ಟಾಕ್ಸಿಕ್​ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದು, ಚಿತ್ರದ ಶೂಟಿಂಗ್​ ಭರದಿಂದ ಸಾಗಿದೆ. ಕೆಜಿಎಫ್​ ಚಿತ್ರಕ್ಕಾಗಿ ಉದ್ದನೆಯ ಗಡ್ಡ ಹಾಗೂ ಕೂದಲು ಬಿಟ್ಟುಕೊಂಡು ಗಮನ ಸೆಳೆದಿದ್ದ ನಟ ಯಶ್​ ಇದೀಗ ಹೊಸ ಸಿನಿಮಾಗಾಗಿ ಸ್ಟೈಲ್ ಬದಲಿಸಿಕೊಂಡಿದ್ದಾರೆ. ಈ ಲುಕ್​ ಸಖತ್​ ವೈರಲ್​ ಆಗುತ್ತಿದೆ.

ಗೀತು ಮೋಹನ್​ ದಾಸ್​ ನಿರ್ದೇಶನದ ಟಾಕ್ಸಿಕ್​ ಚಿತ್ರದ ಫಸ್ಟ್​ಲುಕ್​ ಹಾಗೂ ಪೋಸ್ಟರ್​ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು, ಡ್ರಗ್ಸ್​ ಸಾಮ್ರಾಜ್ಯದ ಕುರಿತಾದ ಚಿತ್ರ ಎಂದು ಸಿನಿರಸಿಕರು ಊಹಿಸಿದ್ದಾರೆ. ಇದರಲ್ಲಿ ಭರ್ಜರಿ ಆ್ಯಕ್ಷನ್ ಕೂಡ ಇರಲಿದ್ದು, ಈ ಚಿತ್ರಕ್ಕಾಗಿ ಯಶ್​ ಅವರ ಲುಕ್​ ಹೇಗಿರಲಿದೆ ಎಂದು ಅನುಮಾನ ಮೂಡಲು ಶುರುವಾಗಿತ್ತು. ಇದೀಗ ಅದಕ್ಕೆಲ್ಲಾ ಉತ್ತರ ದೊರೆತ್ತಿದ್ದು, ರಾಕಿ ಭಾಯ್​ನ ಹೊಸ ಹೇರ್​ಸ್ಟೈಲ್​ ಎಲ್ಲರ ಗಮನ ಸೆಳೆಯುತ್ತಿದೆ.

ಯಶ್​ ಅವರ ಹೊಸ ಹೇರ್​ಸ್ಟೈಲ್​ ನೋಡುವುದಾರೆ ಉದ್ದನೆಯ ಕೂದಲನ್ನು ಶಾರ್ಟ್​​ ಮಾಡಿಸಿದ್ದು, ಅವರ ಗಡ್ಡದ ಲುಕ್​ ಸ್ವಲ್ಪ ಬದಲಾಗಿದೆ. ಅವರ ಈ ಹೊಸ ಹೇರಸ್ಟೈಲ್​ ಯಾವ ರೀತಿ ಟ್ರೆಂಡ್​ ಸೃಷ್ಟಿಸಲಿದೆ ಎಂದು ಕಾದು ನೋಡಬೇಕಿದೆ. ಬಿಡುಗಡೆಗೂ ಮುನ್ನ ಸಾಕಷ್ಟು ಸದ್ದು ಮಾಡುತ್ತಿರುವ ಟಾಕ್ಸಿಕ್​ ಸಿನಿಮಾವು 2025ರ ಏಪ್ರಿಲ್​ನಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ.