ತಮಿಳುನಾಡು: 'ಗಟ್ಟಾ ಖುಷಿ', 'ರತ್ಸಾಸನ್', 'ಲಾಲ್ ಸಲಾಂ', 'ಎಫ್ಐಆರ್' ಸೇರಿದಂತೆ ಹಲವು ಸಿನಿಮಾಗಳ ಮುಖೇನ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ, ನಿರ್ಮಾಪಕ ವಿಷ್ಣು ವಿಶಾಲ್ (Vishnu Vishal), ತಾವ್ಯಾಕೆ ನಟನಾಗಿ ಮುಂದುವರಿಯುವ ಬದಲು ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಿದ್ದೇನೆ ಎಂಬುದರ ಬಗ್ಗೆ ಇದೀಗ ಅಚ್ಚರಿ ಕಾರಣಗಳನ್ನು ಬಹಿರಂಗಪಡಿಸಿದ್ದಾರೆ.
ತಮ್ಮ ಮುಂಬರುವ 'ಆರ್ಯನ್' ಚಿತ್ರದ ಪ್ರೀ-ರಿಲೀಸ್ ಈವೆಂಟ್ನಲ್ಲಿ ಮಾತನಾಡಿದ ವಿಶಾಲ್, "ನಮ್ಮ ಚಿತ್ರರಂಗದ ಯಾವುದೇ ಸಿನಿಮಾ ರಿಲೀಸ್ ಆದರೂ ಅಥವಾ ಯಾವುದೇ ಕಲಾವಿದರು ಉತ್ತವಾಗಿ ನಟಿಸಿದರೆ ಅವರಿಗೆ ವೈಯಕ್ತಿಕವಾಗಿ ನಾನೇ ಕರೆ ಮಾಡಿ, ಅಭಿನಂದನೆ ತಿಳಿಸುತ್ತೀನಿ. ಆದರೆ, ಇದುವರೆಗೆ ನಾನು ಅಭಿನಯಿಸಿದ ಚಿತ್ರಗಳಿಗೆ ಯಾರೊಬ್ಬರು ಫೋನ್ ಮಾಡಿ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ, ನಟನೆ ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಿಲ್ಲ. ನಮ್ಮ ನಿರ್ದೇಶಕರನ್ನು ಮಾತನಾಡಿಸುವ ಮಂದಿ, ನನಗೆ ಏನನ್ನು ಹೇಳುವುದಿಲ್ಲ ಮತ್ತು ಹೇಳಿಲ್ಲ. ಒಂದು ವಿಚಾರದ ಬಗ್ಗೆ ನನಗೆ ಖಾತ್ರಿಯಿದೆ. ಇಂದಲ್ಲ, ನಾಳೆ ಜನರಿಂದ ಬೆಂಬಲ ಮತ್ತು ಪ್ರೋತ್ಸಾಹ ಸಿಗುವ ಹಂತವನ್ನು ನಾನು ತಲುಪುತ್ತೇನೆ" ಎಂದಿದ್ದಾರೆ.
"ನನ್ನ ಒಂದು ಸಿನಿಮಾ ಪೂರ್ಣಗೊಳ್ಳಲು ಒಂದರಿಂದ ಎರಡು ವರ್ಷ ಬೇಕಾಗ್ತಿದೆ. ಅದಕ್ಕೆ ಕಾರಣ, ನಿರ್ಮಾಪಕರ ಬದಲಾವಣೆ. ನಾನು ನಟಿಸಿದ ಹಲವು ಚಿತ್ರಗಳಿಗೆ ಪದೇ ಪದೇ ಪ್ರೊಡ್ಯೂಸರ್ಗಳು ಬದಲಾಗಿದ್ದಾರೆ. ಇದಕ್ಕೆಲ್ಲ ನಾನು ಅರ್ಹನಲ್ಲ. ಇಂದಿಗೂ ನನ್ನ ಮನಸ್ಸಿನಲ್ಲಿ ನೋವು ಮತ್ತು ಬೇಸರವಿದೆ. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಬರುವುದೇ ಬೇಡ ಎಂದು ನನ್ನ ಚಿತ್ರಗಳನ್ನು ನಾನೇ ನಿರ್ಮಾಣ ಮಾಡ್ತಿದ್ದೀನಿ. ನಟಿಸಲಿರುವ 5 ಸಿನಿಮಾಗಳನ್ನು ನಾನೇ ನಿರ್ಮಿಸಲು ಸಜ್ಜಾಗಿದ್ದೀನಿ" ಎಂದು ಹೇಳಿದ್ದಾರೆ,(ಏಜೆನ್ಸೀಸ್).