ನ್ಯೂಸ್

48 ಗಂಟೆಯೊಳಗೆ ಅದೆಲ್ಲವೂ ಡಿಲೀಟ್ ಆಗ್ಬೇಕು ಅಷ್ಟೇ! ಯೂಟ್ಯೂಬರ್​ಗಳಿಗೆ ವಿಷ್ಣು ಮಂಚು ಖಡಕ್ ಎಚ್ಚರಿಕೆ

ಹೈದರಾಬಾದ್: ವಿವಾದಾತ್ಮಕ ಯೂಟ್ಯೂಬರ್ ಪ್ರಣೀತ್ ಹನುಮಂತು ಇದೀಗ ಪೊಲೀಸರ ಅತಿಥಿಯಾಗಿದ್ದು, ತನ್ನ ಯೂಟ್ಯೂಬ್ ವಿಡಿಯೋದಲ್ಲಿ ವಿದೇಶಿ ರೀಲ್ ಮುಂದಿಟ್ಟು, ತಂದೆ-ಮಗಳ ಸಂಬಂಧದ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಲ್ಲದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಈ ಹಿನ್ನೆಲೆ ಇದೀಗ ಆತನನ್ನು ತೆಲಂಗಾಣ ಸೈಬರ್​ ಪೊಲೀಸರು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಿ, ತನಿಖೆ ನಡೆಸುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಟಾಲಿವುಡ್​ ನಟರು ಪ್ರತಿಕ್ರಿಯಿಸಿದ್ದು, ನಟ ವಿಷ್ಣು ಮಂಚು ಟ್ರೋಲರ್ಸ್​ಗಳ ವಿರುದ್ಧ ಧ್ವನಿ ಎತ್ತಿದ್ದಾರೆ.

ಚಿತ್ರನಟ ಹಾಗೂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರೂ ಆಗಿರುವ ವಿಷ್ಣು ಮಂಚು, ಇಂತಹ ಅವಹೇಳನಕಾರಿ ಮತ್ತು ಅಸಹ್ಯಕರ ವೀಡಿಯೊಗಳನ್ನು ಮಾಡುವ ಎಲ್ಲಾ ಡಿಜಿಟಲ್ ಕಂಟೆಂಟ್​ ಕ್ರಿಯೇಟರ್​ಗಳಿಗೆ ಇದು ಸ್ಟ್ರಾಂಗ್​ ಎಚ್ಚರಿಕೆ. ಇನ್ನು ಮುಂದೆ ನಟ-ನಟಿಯರ ಮೇಲಿನ ಆಕ್ಷೇಪಾರ್ಹ ಕಮೆಂಟ್‌ಗಳು ಅಥವಾ ಅಶ್ಲೀಲ ವಿಡಿಯೋಗಳನ್ನು ಅಪ್ಲೋಡ್​ ಮಾಡುವುದನ್ನು ಸಹಿಸುವುದಿಲ್ಲ. ಕಂಟೆಂಟ್ ಕ್ರಿಯೇಟರ್‌ಗಳಾದವರು ಅಂತಹ ಮಾನಹಾನಿಕರ ವೀಡಿಯೊಗಳು, ಮೀಮ್‌ಗಳನ್ನು ಆಯಾ ಚಾನಲ್‌ಗಳಿಂದ 48 ಗಂಟೆಯೊಳಗೆ ತೆಗೆದುಹಾಕಬೇಕು. ಇಲ್ಲದಿದ್ದರೆ ಅವರು ಕಾನೂನು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಮ್ಮ ತಮ್ಮ ಯೂಟ್ಯೂಬ್ ಅಥವಾ ಸೋಷಿಯಲ್ ಮೀಡಿಯಾಗಳಲ್ಲಿ ಅಂತಹ ವೀಡಿಯೊಗಳನ್ನು ನಾವು ಪರಿಶೀಲಿಸುತ್ತೇವೆ. ನಮ್ಮ ಕಣ್ಣಿಗೆ ಬಿದ್ದರೆ ಖಂಡಿತ ಅವರ ವಿರುದ್ಧ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಲು ಸೈಬರ್ ಕ್ರೈಮ್‌ಗೆ ವರದಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ವಿಷ್ಣು ಬೆನ್ನಲ್ಲೇ ತೆಲುಗು ಚಿತ್ರರಂಗದ ದಿಗ್ಗಜ ನಟ ಬ್ರಹ್ಮಾನಂದಂ ಕೂಡ ಅಸಮಾಧಾನ ಹೊರಹಾಕಿದ್ದು, ತಮ್ಮ ಫೋಟೋಗಳು, ಸಿನಿಮಾ ದೃಶ್ಯಗಳನ್ನು ಬಳಸಿಕೊಂಡು ಅಶ್ಲೀಲ ಮೀಮ್‌ಗಳಿಗೆ ಬಳಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).