ಬೆಂಗಳೂರು: ಸ್ಯಾಂಡಲ್ವುಡ್ ನಟ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ವಿಡಿಯೋ ಹಾಗೂ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆಯನ್ನು ಖಂಡಿಸಿ, ಇಂದು ಬೆಂಗಳೂರಿನ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಎಫ್ಐಆರ್ಗೆ ಕಾರಣ, ನಟ ಉಪೇಂದ್ರ ಅವರು ಕಾರ್ಯಕ್ರಮವೊಂದರಲ್ಲಿ ನೀಡಿದ್ದ ಹೇಳಿಕೆಯೊಂದು ಸಾಮಾಜಿಕ ಜಾಲಾತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಇದೀಗ ನಿರ್ದಿಷ್ಟ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಉಲ್ಲೇಖಿಸಿ ದೂರು ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಂದ ದೂರು ಸ್ವೀಕರಿಸಿದ ಪೊಲೀಸರು, ನಟನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಉಪೇಂದ್ರ ಹೇಳಿಕೆಯನ್ನು ಖಂಡಿಸಿ, ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕೆಲವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತಮ್ಮ ವಿಡಿಯೋಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ನಟ, ಫೇಸ್ಬುಕ್ನಿಂದ ದೃಶ್ಯದ ತುಣುಕನ್ನು ಡಿಲೀಟ್ ಮಾಡಿದ್ದು, ಕ್ಷಮೆ ಕೂಡ ಕೇಳಿದ್ದಾರೆ. ಆದ್ರೆ, ಇಷ್ಟಕ್ಕೆ ನಿಲ್ಲದ ಆಕ್ರೋಶಗಳ ಕುರಿತು ಇದೀಗ ಉಪೇಂದ್ರ ಅವರು ಮತ್ತೊಂದು ಪೋಸ್ಟ್ ಹಾಕುವ ಮೂಲಕ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
"ಇಂದು ನನ್ನ ವಿರುಧ್ದ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ. 50 ವರ್ಷಗಳ ಹಿಂದೆ ನನ್ನ ಬಾಲ್ಯ, ನಾನು ಎಂತಹ ಪರಿಸರದಲ್ಲಿ ಬೆಳೆದೆ. ಆ ಬಾಲ್ಯದಲ್ಲಿ ನಾನು ಕಂಡ ಆ ಕ್ರೂರ ಬಡತನ, ನನ್ನ ಕಣ್ಮುಂದೆಯೇ ಬೆಂಕಿ ಹಚ್ಚಿಕೊಂಡು ಆದ ಆತ್ಮಹತ್ಯೆಗಳು, ಹಸಿವು, ಅಪಮಾನ, ತುಳಿತ, ಇದನ್ನು ಅನುಭವಿಸಿ ಬೆಳೆದ ನಾನು ಇಂದು ಒಂದು ವರ್ಗದ ಜನರ ಬಗ್ಗೆ ಅವಮಾನಕಾರಿಯಾಗಿ ಮಾತನಾಡುತ್ತೇನೆಯೇ, ನನಗೆ ಹುಚ್ಚೇ? ಅದಕ್ಕೆ ಕಾರಣವಾದರೂ ಏನು, ಅದರಿಂದ ನನಗೆ ಸಿಗುವ ಲಾಭವಾದರೂ ಏನು, ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ? ಯಾಕೆ ಇಷ್ಟೊಂದು ಧ್ವೇಷ" ಎಂದು ಬರೆದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.