ಮುಂಬೈ: 288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ-ಎನ್‌ಸಿಪಿ (ಅಜಿತ್ ಪವಾರ್) ನೇತೃತ್ವದ ಮಹಾಯುತಿ ಮೈತ್ರಿಕೂಟವು ಭರ್ಜರಿ ಗೆಲುವು ಸಾಧಿಸಿದ್ದು, ಅಧಿಕಾರದತ್ತ ದಾಪುಗಾಲಿರಿಸಿದೆ. ಇತ್ತ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದಂತೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು ಇವಿಎಂ (EVM) ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿದ್ದು, ಈ ಬಗ್ಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhaskar) ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರದ ಅನುಶಕ್ತಿ ನಗರ ವಿಧಾನಸಭಾ ಕ್ಷೇತ್ರದಿಂದ ಎನ್‌ಸಿಪಿ (ಶರದ್ ಪವಾರ್ ಬಣ) ಕಣಕ್ಕಿಳಿದಿದ್ದ ನಟಿ ಸ್ವರಾ ಭಾಸ್ಕರ್ ಪತಿ ಫಹಾದ್ ಅಹ್ಮದ್ ಅಜಿತ್ ಪವಾರ್ (Ajit Pawar) ಬಣದ ಅಭ್ಯರ್ಥಿ ಎದುರು ಸೋಲನ್ನು ಅನುಭವಿಸಿದ್ದು, ಈ ಬಗ್ಗೆ ನಟಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಅನುಶಕ್ತಿ ನಗರ ವಿಧಾನ ಸಭೆಯಲ್ಲಿ ಎನ್‌ಸಿಪಿ-ಎಸ್‌ಪಿಯ ಫಹಾದ್ ಜಿರಾರ್ ಅಹ್ಮದ್ ಅವರ ಸ್ಥಿರ ಮುನ್ನಡೆಯ ನಂತರ 17, 18, 19ರ ಸುತ್ತಿನಲ್ಲಿ ಇದ್ದಕ್ಕಿದ್ದಂತೆ 99% ಬ್ಯಾಟರಿ ಚಾರ್ಜರ್ ಇವಿಎಂಗಳನ್ನು ತೆರೆಯಲಾಗಿದೆ. ಈ ವೇಳೆ ಬಿಜೆಪಿ ಬೆಂಬಲಿತ ಎನ್‌ಸಿಪಿ-ಅಜಿತ್ ಪವಾರ್ ಮೈತ್ರಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಇಡೀ ದಿನ ಮತ ಚಲಾಯಿಸಿದ ಯಂತ್ರಗಳು 99% ಚಾರ್ಜ್ ಮಾಡಿದ ಬ್ಯಾಟರಿಗಳನ್ನು ಹೇಗೆ ಹೊಂದುತ್ತವೆ? ಸಂಪೂರ್ಣವಾಗಿ 99% ಚಾರ್ಜ್ ಮಾಡಿದ ಬ್ಯಾಟರಿಗಳು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಏಕೆ ಮತಗಳನ್ನು ನೀಡುತ್ತವೆ? ಎಂದು ಪ್ರಶ್ನಿಸುವ ಮೂಲಕ ನಟಿ (Swara Bhaskar) ಇವಿಎಂಗಳ (EVM) ಬಗ್ಗೆ ಚಕಾರವನ್ನು ಎತ್ತಿದ್ದಾರೆ.
ನಟಿ ಸ್ವರಾ ಭಾಸ್ಕರ್ (Swara Bhaskar) ಆರೋಪಕ್ಕೆ ಪ್ರತಿಕ್ರಿಯಿಸಿರುವ ಎಲೆಕ್ಷನ್ ಕಮಿಷನ್ (Election Commission), ಬ್ಯಾಟರಿ ವೋಲ್ಟೇಜ್ ಮತ್ತು ಸಾಮರ್ಥ್ಯವು ಮತಕ್ಕೆ ಯಾವುದೇ ಪ್ರಸ್ತುತತೆ ಅಥವಾ ಸಂಪರ್ಕವನ್ನು ಹೊಂದಿಲ್ಲ. ಇವಿಎಂನ ಬ್ಯಾಟರಿಯ ವಿದ್ಯುತ್ ಸಾಮರ್ಥ್ಯವು 7.4 ವೋಲ್ಟ್ ಮತ್ತು 8 ವೋಲ್ಟ್‌ಗಳ ನಡುವೆ ಇರುವ ಸಮಯದಲ್ಲಿ ಶೇ. 99ರಷ್ಟು ಚಾರ್ಜಿದೆ ಎಂದು ತೋರಿಸುತ್ತದೆ. ನಿಖರವಾದ ಬ್ಯಾಟರಿಯನ್ನು ಬಹಿರಂಗಪಡಿಸದೆಯೇ EVM ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನಿರಂತರ ಕಾರ್ಯಾಚರಣೆಗಳನ್ನು ನಿರ್ವಹಿಸಲು ವೋಲ್ಟೇಜ್ ಸಾಕಾಗುತ್ತದೆ ಎಂದು ಚುನಾವಣಾ ಆಯೋಗ ನಟಿಯ ಆರೋಪಕ್ಕೆ ಸ್ಪಷ್ಟನೆ ನೀಡಿದೆ.