ಲಾಕ್ಡೌನ್ ಶುರುವಾದ ಮೇಲೆ ಬಾಲಿವುಡ್ ನಟ ಸೋನು ಸೂದ್ ತಮ್ಮದೇ ರೀತಿಯಲ್ಲಿ ಒಂದಲ್ಲಾ ಒಂದು ಸಹಾಯವನ್ನು ಮಾಡುತ್ತಲೇ ಬಂದಿದ್ದಾರೆ. ಸೋಂಕಿತರಿಗೆ ಕ್ವಾರಂಟೈನ್ ಮಾಡುವುದಕ್ಕೆ ಮೊದಲು ತಮ್ಮ ಹೋಟೆಲ್ ಬಿಟ್ಟು ಕೊಟ್ಟರು, ನಂತರ ವಲಸೆ ಕಾರ್ಮಿಕರಿಗೆ ಬಸ್ ಮಾಡಿ ತಮ್ಮ ತವರೂರಿರಿಗೆ ಕಳಸಿಕೊಟ್ಟರು, ತುಂಬಾ ದೂರ ಇರುವವರನ್ನು ಏರ್ಲಿಫ್ಟ್ ಸಹ ಮಾಡಿಸಿದರು. ಹೀಗೆ ಸತತವಾಗಿ ಸಾವಿರಾರು ಜನರಿಗೆ ಸಹಾಯವಾಗುವಂತಹ ಕೆಲಸ ಮಾಡುತ್ತಲೇ ಇದ್ದಾರೆ.
ಇದನ್ನೂ ಓದಿ: ಯೂಟ್ಯೂಬ್ನಲ್ಲಿ ಹೊಸ ದಾಖಲೆ ಬರೆದ ಡಿಯರ್ ಕಾಮ್ರೆಡ್
ಎಲ್ಲಾ ಸರಿ, ಅವರು ಇಷ್ಟೆಲ್ಲಾ ಮಾಡುತ್ತಿರುವುದರ ಹಿಂದೆ ದುರುದ್ದೇಶವಿದೆಯಾ?ಈ ಸಹಾಯವನ್ನು ಮುಂದಿಟ್ಟುಕೊಂಡು ಮುಂದೊಂದು ದಿನ ರಾಜಕೀಯ ಪ್ರವೇಶ ಮಾಡುತ್ತಾರಾ? ರಾಜಕೀಯ ಪಕ್ಷ ಸೇರುವುದಕ್ಕೆ ಇದನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರಾ? ಎಂಬ ಹಲವು ಪ್ರಶ್ನೆಗಳು ಈ ಹಿಂದೆಯೇ ಕೇಳಿ ಬಂದಿದ್ದವು. ಇದೀಗ ಆ ವಿಚಾರಕ್ಕೆ ಸಂಬಂಧಿಸಿದಂತೆ ಸೋನು ಪ್ರತಿಕ್ರಿಯಿಸಿದ್ದಾರೆ. ಅವರು ನೀಡಿದ ಉತ್ತರ ರಾಜಕೀಯಕ್ಕೆ ಬರುವ ಮುನ್ಸೂಚನೆ ಎಂಬಂತೆ ಗೋಚರವಾಗುತ್ತದೆ.
‘ಕಳೆದ 10 ವರ್ಷಗಳಿಂದ ರಾಜಕೀಯಕ್ಕೆ ಬನ್ನಿ ಎಂದು ಸಾಕಷ್ಟು ಅವಕಾಶಗಳು ಬರುತ್ತಿವೆ. ನೀನೊಬ್ಬ ಗ್ರೇಟ್ ಲೀಡರ್ ಎಂದು ಸುಮಾರು ಮಂದಿ ಹೇಳಿದ್ದಾರೆ. ಆದರೆ, ಒಬ್ಬ ನಟನಾಗಿ ನಾನಿನ್ನೂ ತುಂಬ ದೂರ ಪ್ರಯಾಣಿಸಬೇಕಿದೆ. ನಾನು ಮಾಡಬೇಕಿರುವ ಕೆಲಸ ಇನ್ನೂ ತುಂಬ ಇದೆ. ಬರುವುದಾದರೇ ಯಾವತ್ತೋ ನಾನು ಬಂದುಬಿಡುತ್ತಿದ್ದೆ. ಆದರೆ, ಏಕಕಾಲದಲ್ಲಿ ಎರಡು ದೋಣಿ ಮೇಲಿನ ನಡಿಗೆ ಒಳ್ಳೆಯದಲ್ಲ’ ಎಂದಿದ್ದಾರೆ.
‘ಒಂದು ವೇಳೆ ನಾನು ರಾಜಕೀಯಕ್ಕೆ ಬಂದರೆ, ನಾನು ಶೇ. 100ರಷ್ಟು ಅದರಲ್ಲಿ ತೊಡಗಿಸಿಕೊಳ್ಳುತ್ತೇನೆ. ಯಾರಿಗೆ ಏನೇ ಸಮಸ್ಯೆ ಆದರೂ ನಾನು ಸ್ಪಂದಿಸುತ್ತೇನೆ. ಅವರಿಗಾಗಿ ಸಮಯ ಮೀಸಲಿರಿಸುತ್ತೇನೆ. ಆದರೆ, ಅದೆಲ್ಲದಕ್ಕೂ ಇದು ಸರಿಯಾದ ಸಮಯವಲ್ಲ. ಈ ಹೊತ್ತಿಗೆ ನಡೆಯುವುದಿಲ್ಲ. ನಾನು ಏನು ಮಾಡಬೇಕೆಂದು ಯಾವ ಪಾರ್ಟಿ ಬಳಿಯೂ ಕೇಳುವುದಿಲ್ಲ. ನನಗೆ ತೋಚಿದ್ದನ್ನು ಮಾಡುತ್ತ ಹೋಗುತ್ತೇನಷ್ಟೇ’ ಎಂದಿದ್ದಾರೆ. (ಏಜೆನ್ಸೀಸ್)