ಬೆಂಗಳೂರು: ಪ್ರತಿಬಾರಿಯಂತೆ ಈ ಬಾರಿಯೂ ಆರ್ಸಿಬಿ ಅಭಿಮಾನಿಗಳು ಜೋಶ್ನಲ್ಲಿದ್ದಾರೆ. ಕಪ್ ನಮ್ಮದೆ ಎನ್ನುವ ಕೂಗು ಜೋರಾಗಿಯೆ ಇದೆ. ಆರ್ಸಿಬಿ ಬಿಡುಗಡೆ ಮಾಡಿದ ಪೋಮೊವೊಂದು ಇದೀಗ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸುವಂತೆ ಮಾಡಿದೆ.
ಮಾರ್ಚ್ 19ರಂದು ‘ಆರ್ಸಿಬಿ ಅನ್ಬಾಕ್ಸ್' ಕಾರ್ಯಕ್ರಮ ನಡೆಸಲಿದೆ. ಈ ಸಮಾರಂಭದ ಪ್ರೋಮೊವೊಂದು ಬಿಡುಗಡೆಯಾಗಿದ್ದು, ಕಂಬಳದ ಕೋಣಗಳೊಂದಿಗೆ ಸ್ಯಾಂಡಲ್ವುಡ್ ನಟ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಪ್ರೋಮೋ ಕ್ರೀಡಾ ಅಭಿಮಾನಿಗಳ ತಲೆಗೆ ಹುಳ ಬಿಟ್ಟಂತಾಗಿದೆ.
ಆರ್ಸಿಬಿ ತನ್ನ ಅಭಿಯಾನ ಆರಂಭಿಸುವ ಮುನ್ನ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಈ ಸಲವೂ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದು, ಕಳೆದೆರಡು ವರ್ಷಗಳಿಂದ ಆರ್ಸಿಬಿ ಅನ್ಬಾಕ್ಸ್ ಹೆಸರಿನಲ್ಲಿ ನಡೆಯುತ್ತ ಬಂದಿರುವ ಕಾರ್ಯಕ್ರಮ ಈ ಬಾರಿ ಮಾರ್ಚ್ 19ರಂದು ನಿಗದಿಯಾಗಿದೆ. ಪ್ರೋಮೊದಲ್ಲಿ ಕಂಬಳದ ಕೋಣಗಳೊಂದಿಗೆ ನಟ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಅನ್ಬಾಕ್ಸ್ ಕಾರ್ಯಕ್ರಮ ನಡೆಯಲಿದೆ.
ಆರ್ಸಿಬಿ ಅನ್ಬಾಕ್ಸ್ನಲ್ಲಿ ತಂಡದ ಹೊಸ ಜೆರ್ಸಿಯನ್ನೂ ಅನಾವರಣಗೊಳಿಸಲಾಗುವುದು. ಜತೆಗೆ ಅಭಿಮಾನಿಗಳ ಎದುರು ಹಲವು ಅಚ್ಚರಿಯ ಮತ್ತು ವಿಶೇಷ ಘೋಷಣೆಗಳನ್ನು ಮಾಡಲಾಗುವುದು ಎಂದು ಆರ್ಸಿಬಿ ತಂಡ ಈಗಾಗಲೇ ತಿಳಿಸಿದೆ.
ಕಾಂತಾರ ಸಿನೆಮಾ ಖ್ಯಾತಿಯ ನಟ ರಿಷಬ್ ಶೆಟ್ಟಿ ಅವರು ಈ ಪ್ರೋಮೊದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಕಂಬಳದ ಕೋಣಗಳ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬರೆದಿರುತ್ತದೆ. ಈ ವೇಳೆ ರಿಷಬ್ ಶೆಟ್ಟಿ ಬೆಂಗಳೂರು ಹೆಸರಿನ ಕೋಣವನ್ನು ಇದು ಬೇಡ ಭಟ್ರೆ.. ತೆಗೆದುಕೊಂಡು ಹೋಗಿ ಇದನ್ನು ಎಂದು ಹೇಳಿ ಅರ್ಥ ಆಯ್ತಾ ಎಂದು ಹೇಳುತ್ತಾರೆ. ರಾಯಲ್ ಚಾಲೆಂಜರ್ಸ್ ಮುಂದೆ ಬೆಂಗಳೂರು ಎನ್ನುವ ಹೆಸರು ಬದಲಾಗುವ ಸಾಧ್ಯತೆ ಎನ್ನುವ ಹಾಗೆ ಈ ಪ್ರೋಮೋದಲ್ಲಿ ಕಂಡು ಬಂದಿದೆ.
ಆದರೆ ಈ ಪ್ರೋಮೊ ನೋಡಿದ ಅಭಿಮಾನಿಗಳು ಏನಪ್ಪಾ? ನಮಗೆ ಅರ್ಥವಾಗ್ತಿಲ್ಲ..., ನೀವೆ ಹೇಳಿ..., ಹೆಸರು ಬದಲಾವಣೆ ಮಾಡುತ್ತೀರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.