ನ್ಯೂಸ್

ರಾಜ್​ ತರುಣ್​-ಲಾವಣ್ಯ ಕೇಸ್​ನಲ್ಲಿ ದಿನಕ್ಕೊಂದು ಟ್ವಿಸ್ಟ್​! ಪೊಲೀಸರ ನೋಟಿಸ್​ಗೆ​ ಕಡೆಗೂ ಪ್ರತಿಕ್ರಿಯಿಸಿದ ನಟ​

ತೆಲಂಗಾಣ: 11 ವರ್ಷಗಳ ಲಿವ್​ಇನ್​ ರಿಲೇಷನ್​ಶಿಪ್​ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ತರುಣ್ ವಿರುದ್ಧ ಪ್ರೇಯಸಿ ಲಾವಣ್ಯ ಆರೋಪ ಹೊರಿಸಿದ್ದಾರೆ. ಇತ್ತೀಚೆಗಷ್ಟೇ ತನ್ನ ವಕೀಲರಿಗೆ ಮಧ್ಯರಾತ್ರಿ ಸಂದೇಶ ಕಳಿಸುವ ಮೂಲಕ ತನಗೆ ಅನ್ಯಾಯವಾಗಿದೆ ಎಂದು ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದ ಲಾವಣ್ಯಗೆ ಪೊಲೀಸರು ಬುದ್ಧಿಹೇಳಿ, ಸಾವಿನ ದವಡೆಯಿಂದ ಪಾರು ಮಾಡಿದ್ದರು. ಸದ್ಯ ಇವರಿಬ್ಬರ ವಿಚಾರ ಇದೀಗ ಟಾಲಿವುಡ್​ ಚಿತ್ರರಂಗದಲ್ಲಿ ವಿವಾದದ ಅಲೆಯನ್ನೇ ಸೃಷ್ಟಿಸಿದ್ದು, ಚಿತ್ರರಂಗದವರಿಗೆ ದೊಡ್ಡ ತಲೆನೋವಾಗಿ ಕಾಡುತ್ತಿದೆ.

ಚಿತ್ರಮಂದಿರಗಳಿಗೆ ಲಗ್ಗೆಯಿಡುತ್ತಿರುವ ಹೊಸ ತೆಲುಗು ಸಿನಿಮಾಗಳ ಸುದ್ದಿಗಿಂತಲೂ ನಟ ರಾಜ್ ತರುಣ್-ಲಾವಣ್ಯ ಪ್ರೇಮ ವಿವಾದವೇ ಸದ್ಯ ಭಾರೀ ಸದ್ದು ಮಾಡುತ್ತಿದೆ. ಪ್ರೀತಿ ಹೆಸರಲ್ಲಿ ತನ್ನನ್ನು ನಂಬಿಸಿ, ಮದುವೆಯಾಗಿ ಈಗ ದ್ರೋಹ ಬಗೆದಿರುವ ಪ್ರಿಯತಮ ರಾಜ್​ ಹಾಗೂ ಆತನ ಸ್ನೇಹಿತೆ ನಟಿ ಮಾಳ್ವಿ ಮಲ್ಹೋತ್ರಾ ವಿರುದ್ಧ ಲಾವಣ್ಯ ನರಸಿಂಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಲಾವಣ್ಯ-ರಾಜ್ ತರುಣ್​ ಕೇಸ್​ನಲ್ಲಿ ದಿನಕ್ಕೊಂದು ಟ್ವಿಸ್ಟ್​ ಎದುರಾಗುತ್ತಿದೆ. ನಾನು ನ್ಯಾಯಕ್ಕಾಗಿ ಹೋರಾಡುವೆ ಎಂದು ಪೊಲೀಸರ ಬಳಿ ಅಳಲು ತೋಡಿಕೊಂಡ ಲಾವಣ್ಯ ಆತನನ್ನು ಬಿಡಬೇಡಿ, ನನಗೆ ನ್ಯಾಯ ಕೊಡಿಸಿ ಎಂದಿದ್ದರು. ಆಕೆಯ ದೂರಿನ ಬೆನ್ನಲ್ಲೇ ಎ1 ಆರೋಪಿ ರಾಜ್​ ತರುಣ್​ಗೆ ವಿಚಾರಣೆಗೆ ಬರುವಂತೆ ಪೊಲೀಸರು ಕೊಟ್ಟಿದ್ದ ನೋಟಿಸ್​ಗೆ ಕಡೆಗೂ ಪ್ರತಿಕ್ರಿಯೆ ಬಂದಿದೆ.

ಆತ ನಟಿ​ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ. ನನಗೆ ಮೋಸ ಬಗೆದಿರುವ ರಾಜ್​, ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ. ಅವನಿಂದ ಬಹಳ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ಲಾವಣ್ಯ ನರಸಿಂಗಿ ಪೊಲೀಸ್​ ಠಾಣೆಯಲ್ಲಿ ಕಣ್ಣೀರಿಟ್ಟಿದ್ದರು. ಲಾವಣ್ಯಳ ದೂರಿನ ಅನ್ವಯ ಪೊಲೀಸರು ತನಗೆ ಕಳುಹಿಸಿದ್ದ ನೋಟಿಸ್​ಗೆ ಉತ್ತರಿಸಿರುವ ಆರೋಪಿ ರಾಜ್​, ತಾನು ಪ್ರತಿಕ್ರಿಯಿಸದೆ ತನ್ನ ವಕೀಲರಿಂದ ಉತ್ತರ ಕೊಡಿಸಿದ್ದಾನೆ.

ಗುರುವಾರದೊಳಗೆ (ಜು.18) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ತರುಣ್ ನೀವು ವಿಚಾರಣೆಗೆ ಹಾಜರಾಗಬೇಕು ಎಂದು ನರಸಿಂಗಿ ಪೊಲೀಸರು ನೋಟಿಸ್​ನಲ್ಲಿ ಉಲ್ಲೇಖಿಸಿದ್ದರು. ಇದಕ್ಕೆ ತನ್ನ ಲಾಯರ್​ನಿಂದ ಉತ್ತರಿಸಿರುವ ರಾಜ್ ತರುಣ್, ಕಳೆದ ಕೆಲವು ದಿನಗಳಿಂದ ಅವರು ಊರಿನಲ್ಲಿ ಇರಲಿಲ್ಲ. ಹಾಗಾಗಿ ವಿಚಾರಣೆಗೆ ಬರಲು ಸಾಧ್ಯವಾಗಿಲ್ಲ ಎಂದು ಹೇಳಿಸಿದ್ದಾನೆ. ಆದ್ರೆ, ಪೊಲೀಸರು ಮತ್ತೊಮ್ಮೆ ನೋಟಿಸ್ ಕಳಿಸುವ ಸಾಧ್ಯತೆಗಳು ಹೆಚ್ಚಿವೆ,(ಏಜೆನ್ಸೀಸ್).