ನ್ಯೂಸ್

ಕೋಮಾದಲ್ಲಿದ್ದ ನನ್ನ ಮಗನಿಗೆ ಪ್ರಜ್ಞೆ ಬಂದಾಗ ಹೇಳಿದ್ದೆ Vijay ಹೆಸರು; ಖ್ಯಾತ ಸ್ಟಾರ್​ ನಟನ ಹೇಳಿಕೆ ವೈರಲ್​

ಚೆನ್ನೈ: ತಮ್ಮ ನಟನೆ, ವಿಭಿನ್ನ ಮ್ಯಾನರಿಸಂ ಮೂಲಕ ಭಾರತ ಮಾತ್ರವ್ಲಲದೇ ವಿದೇಶದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟ ದಳಪತಿ ವಿಜಯ್ (Thalapathy Vijay)​ ನಟನೆ ಮಾತ್ರವಲ್ಲದೇ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ತಮಿಳ್​ ವೆಟ್ರಿ ಮುನ್ನೇತ್ರ ಕಳಗಂ ಪಕ್ಷ ಸ್ಥಾಪಿಸುವ ಮೂಲಕ ರಾಜಕೀಯ ಪ್ರವೇಶಿರುವ ವಿಜಯ್​ ಖ್ಯಾತ ನಟರೊಬ್ಬರ ಮಗನ ನೆನೆಪಿನ ಶಕ್ತಿ ಮರಳಲು ಕಾರಣರಾಗಿದ್ಧಾರೆ ಎಂಬ ವಿಚಾರ ರಿವೀಲ್​ ಆಗಿದ್ದು, ಎಲ್ಲರ ಮನ ಗೆಲ್ಲುತ್ತಿದೆ.

ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ಹಿರಿಯ ನಟ ನಾಸರ್ (Nassar)​ ಅವರು ಮೂರು ದಶಕಗಳಿಗೂ ಹೆಚ್ಚಿನ ಕಾಲ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಇಂದಿಗೂ ಬಹುಬೇಡಿಕೆಯ ನಟ ಎನ್ನಿಸಿಕೊಂಡಿದ್ದಾರೆ. ನಟ ನಾಸರ್​ ಅವರ ಪುತ್ರ 2014ರಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾಕ್ಕೆ ಜಾರಿದ್ದರು. ಸುಮಾರು 14 ದಿನಗಳ ಕಾಲ ಕೋಮಾದಲ್ಲಿದ್ದ ನಟನ ಮಗ ಪ್ರಜ್ಞೆ ಬಂದ ಕೂಡಲೇ ನಟ ದಳಪತಿ ವಿಜಯ್​ (Thalapathy Vijay) ಅವರ ಹೆಸರೇಳಿದ್ದು, ಈ ವಿಚಾರವನ್ನು ಸ್ವತಃ ನಾಸರ್​ ಅವರೇ ರಿವೀಲ್​ ಮಾಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ನಾಸರ್ (Nassar)​, ನನ್ನ ಮಗ ಫೈಜಲ್​ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾಕ್ಕೆ ಜಾರಿದ್ದ. 14 ದಿನಗಳ ಬಳಿಕ ಆತನಿಗೆ ಪ್ರಜ್ಞೆ ಮರಳಿತು. ಆತ ಎಚ್ಚರಗೊಂಡ ಬಳಿಕ ಮೊದಲಿಗೆ ಹೇಳಿದ್ದು, ವಿಜಯ್​ (Vijay) ಅವರ ಹೆಸರು. ಏಕೆಂದರೆ ಆತನ ಗೆಳೆಯನ ಹೆಸರು ಕೂಡ ವಿಜಯ್​ (Vijay) ಕುಮಾರ್​ ಆಗಿದ್ದು, ಅಪಘಾತ ನಡೆದ ವೇಳೆ ಆತ ಕೂಡ ಜತೆಯಲ್ಲಿ ಇದ್ದ.

ನಮ್ಮ ಕುಟುಂಬದವರಿಗೆ ಆತನ ಹೆಸರು ನೆನಪಿದೆ ಎಂದು ಖುಷಿಪಟ್ಟೆವು. ಆದರೆ, ಫೈಜಲ್​ಗೆ​ ವಿಜಯ್​ನನ್ನು (Vijay) ಗುರತಿಸಲು ಸಾಧ್ಯವಾಗಲಿಲ್ಲ. ಈ ವಿಚಾರ ನಮಗೆ ಸಾಕಷ್ಟು ಗೊಂದಲ ಮೂಡಿಸಿತು. ಆ ಬಳಿಕ ಫೈಜಲ್​ ಹೇಳುತ್ತಿರುವುದು ದಳಪತಿ ವಿಜಯ್​ (Thalapathy Vijay) ಬಗ್ಗೆ ಎಂಬುದು ನಮಗೆ ತಿಳಿಯಿತು. ಆ ಬಳಿಕ ವಿಜಯ್​ ಅವರ ಸಿನಿಮಾ ಹಾಗೂ ಹಾಡುಗಳನ್ನು ಹಾಕಲು ಶುರು ಮಾಡಿದೆವು. ವಿಜಯ್​ ಕೂಡ ಆಸ್ಪತ್ರೆಗೆ ಭೇಟಿ ನೀಡಿ ನನ್ನ ಮಗನ ಆರೋಗ್ಯ ವಿಚಾರಿಸಿದ್ದರು. ನನ್ನ ಹಾಗೂ ಫೈಜಲ್ ಬಾಳಲ್ಲಿ ವಿಜಯ್ (Thalapathy Vijay) ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದ್ದಾರೆ ಎಂದು ನಟ ನಾಸರ್​ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.