ಚೆನ್ನೈ: ನೆರೆಯ ರಾಜ್ಯ ತಮಿಳುನಾಡಿನಲ್ಲಿ ವಿಧಾನಸಭೆಯ ಚುನಾವಣೆಯ ಕಾವು ರಂಗೇರಿದ್ದು, ಪ್ರಚಾರದ ಅಬ್ಬರದ ನಡುವೆ ನಟ ಮನ್ಸೂರ್ ಅಲಿ ಖಾನ್ ಶನಿವಾರ ಕಸದ ತೊಟ್ಟಿಯ ಪಕ್ಕದಲ್ಲಿ ಬೀದಿ ನಾಯಿಯೊಂದಿಗೆ ಕಾಣಿಸಿಕೊಂಡು ಪ್ರಚಾರ ಮಾಡಿದ್ದು, ಎಲ್ಲರ ಗಮನ ಸೆಳೆಯಿತು.
ಮನ್ಸೂರ್ ಅವರು ಕೊಯಮತ್ತೂರಿನ ತೊಂಡಮುತೂರ್ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅಲ್ಲದೆ, ಅವರ ನಾಮಪತ್ರಗಳನ್ನು ಸಹ ಚುನಾವಣಾ ಅಧಿಕಾರಿಗಳು ನಿನ್ನೆಯೇ ಮೌಲ್ಯೀಕರಿಸಿದ್ದಾರೆ.
ತಮ್ಮ ವಿಭಿನ್ನ ಪ್ರಚಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮನ್ಸೂರ್, ನಾಯಕರು ಮತ್ತು ರಾಜಕಾರಣಿಗಳು ಕೇವಲ ಸುಳ್ಳು ಭರವಸೆಗಳೊಂದಿಗೆ ತಮಿಳುನಾಡನ್ನು ನಾಶ ಮಾಡುತ್ತಿದ್ದಾರೆ. ಯಾವುದನ್ನು ಈಡೇರಿಸುತ್ತಿಲ್ಲ ಎಂದು ಆರೋಪಿಸಿದರು.
ಏಕಾಂಗಿಯಾಗಿ ವಿಭಿನ್ನ ಪ್ರಚಾರದ ಮೂಲಕ ಜನರ ಗಮನ ಸೆಳೆಯುವ ಪ್ರಯತ್ನವನ್ನು ನಟ ಮನ್ಸೂರ್ ಮಾಡುತ್ತಿದ್ದಾರೆ. ಶನಿವಾರವಷ್ಟೇ ಪ್ರಚಾರದ ಅಖಾಡಕ್ಕೆ ಧುಮುಕಿರುವ ಮನ್ಸೂರ್, ಮೊದಲು ಪೆರೂರ್ ಪಟ್ಟೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿನ ಅಂಗಡಿ ವ್ಯಾಪಾರಿಗಳನ್ನು ಭೇಟಿ ಮಾಡಿ ಪ್ರಚಾರ ಮಾಡಿದ್ದರು.
ಇದಾದ ಬಳಿಕ ಹತ್ತಿರದಲ್ಲೇ ಇದ್ದ ಕಸದ ತೊಟ್ಟಿಯ ಬಳಿ ತೆರಳಿದ ಮನ್ಸೂರ್, ಅಲ್ಲಿ ಬಿದ್ದಿರುವ ಕಸದ ನಿರ್ವಹಣೆ ಜವಬ್ದಾರಿ ಯಾರದ್ದು ಎಂದು ವಿಚಾರಣೆ ಮಾಡಿದರು. ಬಳಿಕ ಅಲ್ಲಿಯೇ ಇದ್ದ ಬೀದಿ ನಾಯಿಯನ್ನು ಕರೆದು ಅದರೊಂದಿಗೆ ಕೆಲ ಕಾಲ ಆಟವಾಡಿದರು. ಈ ವೇಳೆ ಅವರ ಮುಂದೆ ಹಾದುಹೋಗುತ್ತಿದ್ದ ಜನರನ್ನು ತಡೆದು ಸಮಸ್ಯೆಗಳನ್ನು ಆಲಿಸಿ, ನೋಟ್ಬುಕ್ನಲ್ಲಿ ವಿಳಾಸದ ಜತೆಗೆ ಬರೆದುಕೊಳ್ಳುತ್ತಿದ್ದರು. ಶಾಸಕನಾದರೆ ಖಂಡಿತ ಸಮಸ್ಯೆಗಳನ್ನು ಬಹೆಹರಿಸುತ್ತೇನೆಂದು ಭರವಸೆ ನೀಡುತ್ತಿದ್ದರು. ಹೀಗೆ ತಮ್ಮ ವಿಭಿನ್ನ ಮತಬೇಟೆಯ ಮೂಲಕ ಮನ್ಸೂರ್ ಕೊಯಮತ್ತೂರ್ ಜನರ ಗಮನ ಸೆಳೆದರು. (ಏಜೆನ್ಸೀಸ್)