ನ್ಯೂಸ್

ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ ಶಕುನಿ ಪಾತ್ರಧಾರಿ ಗುಫಿ ಪೈಂಟಲ್​

ಮುಂಬೈ: ಬಿ.ಆರ್​.ಚೋಪ್ರಾ ನಿರ್ದೇಶನದ ಮಹಾಭಾರತ ಧಾರವಾಹಿಯಲ್ಲಿ ಶಕುನಿ ಪಾತ್ರವನ್ನು ನಿರ್ವಹಿಸಿದ್ದ ಹಿರಿಯ ನಟ ಗುಫಿ ಪೈಂಟಲ್ ಇಂದು ಬೆಳಿಗ್ಗೆ ಇಹಲೋಕವನ್ನು ತ್ಯಜಿಸಿದ್ದಾರೆ.

ಈ ಕುರಿತು ಅವರ ಸಂಬಂಧಿಕರು ಮಾಹಿತಿ ನೀಡಿದ್ದಾರೆ. 79 ವರ್ಷದ ನಟ ಗುಫಿ ಹೃದಯ ಮತ್ತು ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದು, ಮುಂಬೈನ ಅಂಧೇರಿಯ ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಗುಫಿ ಮೃತಪಟ್ಟಿದ್ದಾರೆ.

ರಿಷಿ ಕಪೂರ್, ನೀತು ಕಪೂರ್ ಮತ್ತಿತರ ಕಲಾವಿದರ ಜತೆ ನಟಿಸಿದ್ದ ಗುಫಿ ಅವರು ದಿಲ್ಲಗಿ, ದೇಶ್ ಪರದೇಶ್ ಮತ್ತು ಸುಹಾಗ್ ಸಿನಿಮಾಗಳಲ್ಲಿ ನಟಿಸಿದ್ದರು. ರಫೂ ಚಕ್ಕರ್ ಎಂಬ ಚಲನಚಿತ್ರದೊಂದಿಗೆ 1975ರಲ್ಲಿ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದ್ದ ಅವರು ಶಾ ಜಫರ್, ಕಾನೂನ್, ಓಂ ನಮಃ ಶಿವಾಯ, ಸಿಐಡಿ, ಶ್​ ಕೋಯಿ ಹೈ, ದ್ವಾರಕಾಧೀಶ ಭಗವಾನ್ ಶ್ರೀ ಕೃಷ್ಣ, ರಾಧಾಕೃಷ್ಣ ಮತ್ತು ಜೇ ಕನಿಯಾ ಲಾಲ್ ಕಿ ಧಾರಾವಾಹಿಗಳಲ್ಲಿ ನಟಿಸಿದ್ದರು.(ಏಜೆನ್ಸೀಸ್​)