ಬೆಂಗಳೂರು: ನಟ ರಾಕ್ಷಸ, ಸ್ಯಾಂಡಲ್‌ವುಡ್‌ನ ದಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಖ್ಯಾತಿ ಪಡೆದಿರುವ ಬಹುಭಾಷಾ ನಟ ಡಾಲಿ ಧನಂಜಯ್ (Dhananjay) ಅವರು ಫೆಬ್ರವರಿ 16ರಂದು ವೈದ್ಯೆ ಧನ್ಯತಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಸದ್ಯ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ಮದುವೆ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ನಟ ಧನಂಜಯ್ ಅವರು ಚಿತ್ರರಂಗ, ರಾಜಕೀಯ, ಕ್ರೀಡೆ, ಅಭಿಮಾನಿಗಳು ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರನ್ನು ಮದುವೆಗೆ ಆಹ್ವಾನಿಸಿದ್ದಾರೆ. ಈ ಬಗೆಗಿನ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೆಬ್ರವರಿ 16ರಂದು ಧನಂಜಯ್ (Dhananjay) ಹಾಗೂ ಧನ್ಯತಾ (Dhanyatha) ಅವರ ಮದುವೆ ಮೈಸೂರಿನಲ್ಲಿ ನಡೆಯಲಿದ್ದು, ತಮ್ಮೆಲ್ಲಾ ಅಭಿಮಾನಿಗಳಿಗೆ ಧನಂಜಯ ಹಾಗೂ ಧನ್ಯತಾ ವಿಶೇಷವಾಗಿ ಆಹ್ವಾನಿಸಿದ್ದಾರೆ. ಈ ಕುರಿತಾದ ವಿಡಿಯೋ ಒಂದು ಸದ್ಯ ಟ್ರೆಂಡ್ ಆಗಿದೆ. ಧನಂಜಯ್ ಅಭಿಮಾನಿಗಳನ್ನು ಮದುವೆಗೆ ಆಹ್ವಾನಿಸಿರುವ ರೀತಿ ಎಲ್ಲರ ಗಮನ ಸೆಳೆಯುತ್ತಿದೆ.
ಮದುವೆಯ ಜೊತೆಗೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಿರುವ ಡಾಲಿ ಧನಂಜಯ್ (Dhananjay) ಅವರು ಜಿಂಗೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಧನಂಜಯ್ ಅವರ ಕ್ಯಾರೆಕ್ಟರ್ ಇಂಟ್ರೋಡಕ್ಷನ್ ವಿಡಿಯೋ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ಜಿಂಗೋ ಸ್ಟೈಲ್ನಲ್ಲೇ ಬೈ ಬೈ ಬ್ಯಾಚುಲರ್ ವಿಡಿಯೋ ಸಿದ್ಧಪಡಿಸಿ ಅಭಿಮಾನಿಗಳಿಗೆ ಮದುವೆ ಆಹ್ವಾನವನ್ನು ನೀಡಿರುವ ಧನಂಜಯ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಸದ್ಯ ಬಿಡುಗಡೆಯಾಗಿರುವ ವಿಡಿಯೋ ನೋಡುವುದಾದರೆ ಧನಂಜಯ್ ಬ್ಯಾಚುಲರ್ ಜೀವನ ಹೇಗಿತ್ತು ಎಂಬುದನ್ನು ವಿವರಿಸಿ, ನಂತರ ಅವರ ಬಾಳಲ್ಲಿ ಧನ್ಯತಾ ಹೇಗೆ ಎಂಟ್ರಿ ಕೊಟ್ಟರು ಎಂಬುದನ್ನ ವಿವರಿಸಲಾಗಿದೆ. ಆ ಬಳಿಕ ಧನಂಜಯ್ ಅವರು ಜೀವನಪೂರ್ತಿ ನಿನ್ನ ಜೊತೆ ರೀಲ್ಸ್ ಮಾಡ್ಕೊಂಡೆ ಇರ್ತೀನಿ ಎಂದು ಹೇಳಿ ಧನ್ಯತಾ ಅವರಿಗೆ ಉಂಗುರವನ್ನು ತೊಡಿಸುತ್ತಾರೆ. ಈ ವಿಡಿಯೋಗೆ ನಟ ನಾಗಭೂಷಣ್ ಧ್ವನಿ ನೀಡಿದ್ದು, ಹೊಸ ಜೀವನಕ್ಕೆ ಕಾಲಿಡಲಿರುವ ಕ್ಯೂಟ್ ಜೋಡಿಯ ವಿಡಿಯೋ ಎಲ್ಲರ ಮನ ಗೆಲ್ಲುತ್ತಿದೆ.