ನ್ಯೂಸ್

ಸಾಧಕನ ಜೀವನದ ಶಕ್ತಿಯೇ ಸಾಧನೆ!

ಅನೇಕಾನೇಕ ದೇವಮಾನವರು ಈ ಜಗತ್ತಿನಲ್ಲಿ ಬಂದು ಹೋಗಿರುತ್ತಾರೆ. ಆದರೆ ಅವರು ಎಂದೂ, ಯಾವ ದಿನವೂ ನಾನು ಶ್ರೇಷ್ಠ! ನನ್ನ ಶಿಷ್ಯರಾದಲ್ಲಿ ನಿಮ್ಮ ಸರ್ವ ದುರಿತಗಳೂ ದೂರವಾಗುತ್ತವೆ ಎಂದು ಹೇಳಿದವರಲ್ಲ. ಅವರು ಕೇವಲ ಭಗವದ್ ಚಿಂತನೆಯಲ್ಲಿ ನಿರತರಾಗಿ ನಿಜವಾದ ಅರ್ಥದಲ್ಲಿ ಸಾಧಕ ಎಂದೆನಿಸಿಕೊಳ್ಳುತ್ತಾರೆ. ಆ ಮಹಾನ್ ಪರಂಪರೆಯ ಶ್ರೇಷ್ಠರಲ್ಲಿ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಇದ್ದಾರೆ. ಕಾರಣ, ಕಠಿಣ ಸಾಧನೆ ಮತ್ತು ತ್ಯಾಗ-ವೈರಾಗ್ಯದ ಹಿನ್ನೆಲೆಯಲ್ಲಿ ಸಾಧನಾ ಮಾರ್ಗದಲ್ಲಿ ಅಹರ್ನಿಶಿ ತೊಡಗುವುದೇ ವಿನಃ ಬೇರಾವ ವಿಧವಾದ ಒಳದಾರಿ ಇರದು. ಅದರಲ್ಲಿಯೂ ಸನಾತನ ಧರ್ಮ ಮಾರ್ಗದಲ್ಲಿ ಅಧ್ಯಾತ್ಮ ಜೀವನದ ಉತ್ತುಂಗ ಸ್ಥಿತಿಯನ್ನು ಸೇರಬೇಕೆಂದಲ್ಲಿ ಒಳದಾರಿಗಳಿಲ್ಲದೆ ನೇರ, ನಿಖರ, ಶುಭ್ರ, ಪವಿತ್ರ ಸಾಧನಾ ಪಥವನ್ನು ಪಥಿಸಬೇಕಾಗುತ್ತದೆ. ಹಾಗಾದಲ್ಲಿ ಈ ಪೂಜಾ ವಿಧಾನಗಳು, ಸೇವೆಗಳು ಇತ್ಯಾದಿ ಏಕೆ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಅದಕ್ಕೆ ಭಗವಾನ್ ಶ್ರೀ ಶಂಕರಾಚಾರ್ಯರು ತಮ್ಮ ಅದ್ಭುತವಾದ ಗ್ರಂಥದಲ್ಲಿ ಹೀಗೆ ತಿಳಿಸುತ್ತಾರೆ: ಚಿತ್ತಸ್ಯ ಶುದ್ಧಯೇ ಕರ್ಮ ನ ತು ವಸ್ತೂಫಲಬ್ಧಯೇ | ವಸ್ತುಸಿದ್ದಿರ್ವಿಚಾರೇಣ ನ ಕಿಂಚಿತ್​ಕರ್ಮಕೋಟಿಬಿಃ || (ವಿವೇಕ ಚೂಡಾಮಣಿ).

ನಾವು ಕೈಗೊಳ್ಳುವ ಪ್ರತಿಯೊಂದು ಕರ್ಮಗಳೂ ನಮ್ಮ ಮನಸ್ಸನ್ನು ಶುದ್ಧಿಪಡಿಸುವಂತಾಗಬೇಕು. ಅಧ್ಯಾತ್ಮ ಜೀವನದ ಅದ್ಭುತವಾದ ಮಜಲು ಎಂದರೆ ಚಿತ್ತ ಶುದ್ಧಿ, ನಿರ್ಮಮತ್ವ, ನಿರ್ಮಲ ಮನಸ್ಸು. ಎಲ್ಲಾ ಸೇವೆ, ಕೈಂಕರ್ಯ, ಪೂಜೆ, ಆರಾಧನೆಗಳು ಮನಸ್ಸನ್ನು ಶುದ್ಧಿಗೊಳಿಸುತ್ತಾ ಕೊನೆಗೊಂದು ದಿನ ನಾನು ಎಂಬುದು ಸಂಪೂರ್ಣ ಮಾಯವಾಗಿ ನೀನು, ನಾನು ಯಂತ್ರ, ನೀನು ಯಂತ್ರೀ ಎಂಬ ಮನಸ್ಸಿನ ಸ್ಥಿತಿ ಬಂದಾಕ್ಷಣವೇ ಅಧ್ಯಾತ್ಮದಲ್ಲಿ ಪ್ರಗತಿ ಹೊಂದುವೆ ಎಂದು ಪರಮಹಂಸರು ಹಲವು ಬಾರಿ ಭೋಧಿಸುತ್ತಿದ್ದರು. ಸರ್ವಸ್ವವೂ ನೀನೇ ಎಂಬ ಶರಣಾಗತಿ ಭಾವನೆ ಬಂದಾಗ ಸಾಧನೆಯ ಪಥದಲ್ಲಿ ಮುಂದುವರಿಯುವ ಎಲ್ಲ ಲಕ್ಷಣಗಳು ಒದಗಿಬರುತ್ತದೆ.

ಅದೊಂದು ದಿನ ಬ್ರಹ್ಮ ಸಮಾಜದ ವರಿಷ್ಠ ಕೇಶವ ಚಂದ್ರಸೇನ ಭಗವಾನ್ ರಾಮಕೃಷ್ಣರಲ್ಲಿ ಹೀಗೆ ಕೇಳುತ್ತಾನೆ: ‘ನಿಮ್ಮ ಅನುಭವಗಳಲ್ಲಿ ಕಾಳಿ ಈ ಜಗತ್ತಿನಲ್ಲಿ ಎಷ್ಟೊಂದು ಭಾವಗಳಲ್ಲಿ ಕಾಣಬರುತ್ತಾಳೆ?’ ರಾಮಕೃಷ್ಣರು ನಗುನಗುತ್ತಾ , ‘ ಓ ಆಕೆ ವಿವಿಧ ಭಾವಗಳಲ್ಲಿ ವ್ಯವಹರಿಸುತ್ತಾಳೆ. ಆಕೆಯೇ ಮಹಾಕಾಳಿ, ನಿತ್ಯ ಕಾಳಿ, ಸ್ಮಶಾನ ಕಾಳಿ, ರಕ್ಷಾ ಕಾಳಿ, ಶ್ಯಾಮಾ ಕಾಳಿ, ಮಹಾಕಾಳಿ. ಇದರ ವಿಚಾರ ತಂತ್ರಶಾಸ್ತ್ರದಲ್ಲಿ ವರ್ಣನೆ ಇದೆ. ಸೃಷ್ಟಿ ಆರಂಭವಾಗುವ ಮುನ್ನ ಚಂದ್ರ, ಸೂರ್ಯ, ಗ್ರಹ, ಪೃಥಿವಿ ಇವೆಲ್ಲಾ ಉದ್ಭವವಾಗುವ ಮುನ್ನ ಎಲ್ಲೆಲ್ಲಿಯೂ ನಿಬಿಢಾಂಧಕಾರ ಹಬ್ಬಿದಾಗ ಭಗವತಿ-ನಿರಾಕಾರ ಸ್ವರೂಪಿಣಿ ಮಹಾಕಾಳಿ ಮಹಾಕಾಲನೊಡನೆ ಐಕ್ಯವಾಗಿದ್ದಳು’ ’ ಎಂದು ಉತ್ತರಿಸುತ್ತಾರೆ.

ಬಹುಶಃ ಅಧ್ಯಾತ್ಮ ಜೀವನದ ಸಾಧನಾ ಪರ್ವದ ಅತ್ಯಂತ ಉತ್ಕೃ್ಟ ಅನುಭವದ ನುಡಿಗಳು ಇವು. ಬಂಧನ ಮತ್ತು ಮುಕ್ತಿ ಇವೆರಡರ ಕರ್ತಳೂ ಭವತಾರಿಣಿಯೇ. ಆಕೆಯ ಮಾಯೆಯ ದೆಸೆಯಿಂದ ಸಾಂಸಾರಿಕ ಜೀವರು ಕಾಮಕಾಂಚನದಿಂದ ಬದ್ದರಾಗುತ್ತಾರೆ. ಮತ್ತೆ ಆಕೆಯ ಕೃಪೆಯಿಂದ ಮುಕ್ತರಾಗುತ್ತ್ತಾರೆ. ಆಕೆ ನಮ್ಮ ಭವಬಂಧನವನ್ನು ಹರಿದು ರಕ್ಷಿಸುತ್ತಾಳೆ, ಕಾಪಾಡುತ್ತಾಳೆ. ಈ ರೀತಿಯಾಗಿ ಪರಮಹಂಸರು ಭಕ್ತರೊಂದಿಗೆ ಮಾತನಾಡುವಾಗ ಯಾವುದೇ ರೀತಿಯ ಅನುಮಾನ, ಸಂದೇಹಕ್ಕೆ ಅವಕಾಶವೇ ಇಲ್ಲ. ಕಾರಣ, ಅವರು ಕೈಗೊಂಡ ಕಠೋರ ಸಾಧನೆಯ ಫಲ ಇವಾಗಿದ್ದವು. ರಾಮಕೃಷ್ಣರ ನುಡಿಗಳಲ್ಲಿ ಸ್ವಾನುಭವ, ಭಗವದ್ದರ್ಶನ ಪಡೆದು ನುಡಿಯ ಅಮೃತವಾಣಿಗಳಿಗೂ ಕೇವಲ ಮಾತನಾಡುವವರಿಗೂ ವ್ಯತ್ಯಾಸ ಕಾಣಬಹುದಾಗಿದೆ. ಪರಮಹಂಸರು, ಸತ್ಯವಚನ ಪರಿಪಾಲಕರು ಮತ್ತು ಸತ್ಯನಿಷ್ಠರು ಆಗಿದ್ದ ಕಾರಣ ಅವರ ನುಡಿಗಳೇ ಸತ್ಯ ವಾಕ್ಯವಾಗುತ್ತಿದ್ದವು. ಅಂತಹ ಮಹಾನ್ ಸಾಧಕನನ್ನು ಮತ್ತು ಅವರ ಜೀವನ ದರ್ಶನವನ್ನು ಬಹುಶಃ ಯಾವ ಅಧ್ಯಾತ್ಮ ಸಾಧಕನೂ ಪಡೆದಿರಲಾರ. ಅನೇಕ ವೇಳೆ ಪ್ರಾಪಂಚಿಕ ನೋವನ್ನು ಕೇಳಿ ತಾವೇ ದುಃಖತಪ್ತರಾಗುತ್ತಿದ್ದ ಪ್ರಸಂಗಗಳು ಮತ್ತು ತತ್​ಕ್ಷಣ ಆ ನೊಂದ ಜೀವಗಳಿಗೆ ಭರವಸೆ ನೀಡುವ ಕರುಣಾಮೂರ್ತಿಯೂ ಆಗಿದ್ದರು ಪರಮಹಂಸರು. ಅದೊಂದು ಬಾರಿ ಸಂಸಾರಿಗಳ ಆರ್ತನಾದವನ್ನು ಆಲಿಸಿ ಈ ರೀತಿ ತಿಳಿಸುತ್ತಾರೆ:

ಸತ್ಯವಾಗಿ ಹೇಳುತ್ತೇನೆ; ನೀವು ಸಂಸಾರದಲ್ಲಿ ಇದ್ದೀರಿ. ಇದು ದೋಷವಾದ್ದೇನಲ್ಲ, ಆದರೆ ನೀವು ಭಗವಂತನ ಕಡೆಗೆ ಮನಸ್ಸು ತಿರುಗಿಸಿ ಇಡಬೇಕು; ಇಲ್ಲದಿದ್ದರೆ ನೀವು ಜಯಶಾಲಿಗಳಾಗುವುದಿಲ್ಲ. ಒಂದು ಕೈಯಿಂದ ಭಗವಂತನನ್ನು ಬಲವಾಗಿ ಹಿಡಿದುಕೊಳ್ಳಿ. ಕರ್ತವ್ಯ, ಕರ್ಮಗಳು ಮುಗಿದ ನಂತರ ಎರಡೂ ಕೈಗಳಿಂದಲೂ ಭಗವಂತನನ್ನು ಹಿಡಿದುಕೊಳ್ಳಿ. ಯಾವಾತ ಭವತಾರಿಣಿಯನ್ನು ಸದಾ ಕಾಣುತ್ತಾನೆಯೋ ಆ ಅವತಾರ ವರಿಷ್ಠನ ಸತ್ಯನುಡಿಗಳಿವು.